ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತದ ಮಹಿಳಾ ಹಾಕಿ ತಂಡ ಪ್ರಕಟ

Update: 2019-09-13 17:17 GMT

ಹೊಸದಿಲ್ಲಿ, ಸೆ.13: ಐದು ಪಂದ್ಯಗಳ ಸರಣಿಯನ್ನು ಆಡಲು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ 18 ಸದಸ್ಯೆಯರನ್ನು ಒಳಗೊಂಡ ಭಾರತೀಯ ಮಹಿಳಾ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಸ್ಟಾರ್ ಫಾರ್ವರ್ಡ್ ಆಟಗಾರ್ತಿ ರಾಣಿ ರಾಂಪಾಲ್ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ಹಾಕಿ ಸರಣಿಯು ಸೆ.27 ರಿಂದ ಅಕ್ಟೋಬರ್ 4ರ ತನಕ ನಡೆಯಲಿದೆ. ಗೋಲ್‌ಕೀಪರ್ ಸವಿತಾ ಉಪ ನಾಯಕಿಯಾಗಿ ಆಯ್ಕೆಯಾಗಿದ್ದು, ರಾಣಿಗೆ ನೆರವಾಗಲಿದ್ದಾರೆ.

ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಲ್ಲಿ ವಿಜಯಿಯಾಗಿರುವ ತಂಡದಲ್ಲಿದ್ದ ಸವಿತಾ ಹಾಗೂ ರಜನಿ ಎಟಿಮರ್ಪು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಡಿಫೆಂಡರ್‌ಗಳಾದ ದೀಪ್ ಗ್ರೇಸ್ ಎಕ್ಕಾ,ಗುರ್ಜಿತ್ ಕೌರ್, ರೀನಾ ಖೋಖರ್ ಹಾಗೂ ಸಲೀಮಾ ಟೇಟೆ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

ಗಾಯದ ಸಮಸ್ಯೆಯಿಂದ ದೀರ್ಘ ಸಮಯ ಹಾಕಿಯಿಂದ ದೂರ ಉಳಿದಿದ್ದ ಹಿರಿಯ ಆಟಗಾರ್ತಿ ನಮಿತಾ ಟೊಪ್ಪೊ ತಂಡಕ್ಕೆ ವಾಪಸಾಗಿದ್ದಾರೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಭಾರತದ ಮಿಡ್ ಫೀಲ್ಡ್‌ನಲ್ಲಿ ಅನುಭವಿ ಆಟಗಾರ್ತಿಯರಾದ ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಮೋನಿಕಾ, ನೇಹಾ ಗೊಯಲ್ ಹಾಗೂ ಲಿಲಿಮಾ ಮಿಂಝ್‌ರಿದ್ದಾರೆ. ಫಾರ್ವರ್ಡ್ ಲೈನ್‌ನಲ್ಲಿ ರಾಣಿ, ವಂದನಾ ಕಟಾರಿಯ, ನವನೀತ್ ಕೌರ್, ಲಾಲ್‌ರೆಂಸಿಯಾಮಿ, ನವಜೋತ್ ಕೌರ್ ಹಾಗೂ ಯುವ ಆಟಗಾರ್ತಿ ಶರ್ಮಿಳಾ ದೇವಿ ಅವರಿದ್ದಾರೆ. ಶರ್ಮಿಳಾ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಲ್ಲಿ ಹಾಕಿಗೆ ಕಾಲಿರಿಸಿದ್ದರು.

‘‘ಈ ಹಿಂದಿನ ಟೂರ್ನಮೆಂಟ್‌ನಂತೆಯೇ ತಂಡ ಸಮತೋಲಿತವಾಗಿದ್ದು, ಆಟಗಾರ್ತಿಯರ ಸಮ್ಮಿಶ್ರಣವಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನಮ್ಮ ಮುಂದಿರುವ ಪ್ರಮುಖ ಗುರಿಯಾಗಿದೆ. 2018ರ ಏಶ್ಯನ್ ಗೇಮ್ಸ್ ಬಳಿಕ ಮೊದಲ ಬಾರಿ ನಮಿತಾ ಟೊಪ್ಪೊ ತಂಡಕ್ಕೆ ವಾಪಸಾಗಿರುವುದು ಉತ್ತಮ ಬೆಳವಣಿಗೆ. ‘‘ಇಂಗ್ಲೆಂಡ್‌ಗೆ ತೆರಳುವ ಮೊದಲು ನಾವು 10 ದಿನಗಳ ಕಾಲ ತರಬೇತಿ ನಡೆಸಲಿದ್ದೇವೆ’’ ಎಂದು ಮುಖ್ಯ ಕೋಚ್ ಜೋರ್ಡ್ ಮರ್ಜಿನ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳು 2019ರ ನವೆಂಬರ್‌ನಲ್ಲಿ ಒಡಿಶಾದಲ್ಲಿ ಅಮೆರಿಕದ ವಿರುದ್ಧ ನಡೆಯಲಿರುವ ಎಫ್‌ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ಉತ್ತಮ ತಯಾರಿಯಾಗಲಿದೆ ಎಂದು ಮರ್ಜಿನ್ ಅಭಿಪ್ರಾಯಪಟ್ಟರು.

ಭಾರತೀಯ ಹಾಕಿ ತಂಡ

► ಗೋಲ್‌ಕೀಪರ್‌ಗಳು: ಸವಿತಾ(ಉಪ ನಾಯಕಿ), ರಜನಿ ಎಟಿಮರ್ಪು

► ಡಿಫೆಂಡರ್‌ಗಳು: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ರೀನಾ ಖೋಖರ್, ಸಲಿಮಾ ಟೇಟ್.

► ಮಿಡ್ ಫೀಲ್ಡರ್‌ಗಳು: ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಮೋನಿಕಾ, ನೇಹಾ ಗೋಯಲ್, ಲಿಲಿಮಾ ಮಿಂಝ್, ನಮಿತಾ ಟೊಪ್ಪೊ.

*ಫಾರ್ವರ್ಡ್‌ಗಳು: ರಾಣಿ(ನಾಯಕಿ), ವಂದನಾ ಕಟಾರಿಯ, ನವನೀತ್ ಕೌರ್, ಲಾಲ್‌ರೆಂಸಿಯಾಮಿ, ನವಜೋತ್ ಕೌರ್, ಶರ್ಮಿಳಾ ದೇವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News