ದಕ್ಷಿಣ ಕೊಡಗಿನಲ್ಲಿ ಕಾಡಾನೆ ಹಾವಳಿ: ಬೆಳೆಗಾರರಿಗೆ ಸಂಕಷ್ಟ

Update: 2019-09-13 18:18 GMT

ಮಡಿಕೇರಿ, ಸೆ.13 : ಮಹಾಮಳೆಯ ಪ್ರವಾಹದಿಂದ ಕಂಗೆಟ್ಟಿದ್ದ ದಕ್ಷಿಣ ಕೊಡಗಿನ ರೈತರಿಗೆ ಹಾಗೂ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಮೂರು ದಿನಗಳಿಂದ ಕಾಡಾನೆಗಳ ಹಿಂಡು ವಿರಾಜಪೇಟೆ ತಾಲೂಕಿನ ವಿವಿಧೆಡೆ ಲಗ್ಗೆ ಇಟ್ಟಿದ್ದು, ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.  

ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದ ಎ.ಬಿ. ನಾಚಪ್ಪ ಮತ್ತು ಎ.ಟಿ. ಬೊಳ್ಳಮ್ಮ ಅವರ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡು ಫಸಲು ಇರುವ ಕಾಫಿ ಗಿಡಗಳನ್ನು ಬುಡ ಸಹಿತ ತುಳಿದು ಹಾಕಿದೆ, ಅಡಿಕೆ, ಕಾಳು ಮೆಣಸು ಫಸಲನ್ನು ಕೂಡ ನಾಶ ಮಾಡಿವೆ.

ಅತಿವೃಷ್ಟಿಯಿಂದ ಭಾರೀ ನಷ್ಟ ಉಂಟಾಗಿರುವ ಬೆನ್ನಲ್ಲೇ ಅಳಿದುಳಿದ ಬೆಳೆಯನ್ನು ಕಾಡಾನೆಗಳು ನುಗ್ಗಿ ನಾಶಪಡಿಸುತ್ತಿದ್ದು, ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೆಳೆಗಾರ ಎ.ಬಿ.ನಾಚಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮತ್ತೊಂದೆಡೆ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ, ಅಮ್ಮತ್ತಿ, ಸಿದಾಪುರ ಭಾಗದಲ್ಲೂ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅಪಾರ ಪ್ರಮಾಣದ ಕೃಷಿ ಫಸಲು ನಾಶದೊಂದಿಗೆ ಕಾರ್ಮಿಕರು, ರೈತರು ಕಂಗಾಲಾಗಿದ್ದಾರೆ.

ಕೃಷಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ರೈತರು  ಬೆಳೆದ ಭತ್ತ, ಕಾಫಿ, ತೆಂಗು, ಬಾಳೆ, ಅಡಕೆ ಸೇರಿದಂತೆ ಇತರ ಕೃಷಿ ಫಸಲುಗಳನ್ನು ಕಾಡಾನೆಗಳು ತುಳಿದು, ತಿಂದು ನಾಶ ಮಾಡುವ ಮೂಲಕ ಭಾರೀ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿವೆ. ರಾತ್ರಿ ಮಾತ್ರವಲ್ಲದೆ, ಹಾಡಹಗಲಿನಲ್ಲೂ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಿಂಡಿನ ಭಯದಿಂದ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬ್ಯಾಂಕ್ ಹಾಗೂ ಕೈ ಸಾಲ ಮಾಡಿ ಬೆಳೆಸಿದ ಕೃಷಿಯನ್ನು ಕಾಡಾನೆಗಳು ತುಳಿದು ತಿಂದು ನಾಶ ಮಾಡುವ ಮೂಲಕ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿವೆ.

ಇದರಿಂದ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದೆ  ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿರುವ ಕೃಷಿಕರು ಸರಕಾರ ಹಾಗೂ ಅರಣ್ಯ ಇಲಾಖೆ ರೈತರಿಗೆ ಹೆಚ್ಚಿನ ಮೊತ್ತದಲ್ಲಿ ಪರಿಹಾರ ನೀಡುವ ಮೂಲಕ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯ ಮುಕೊಂಡ ವಿಜು ಸುಬ್ರಮಣಿ ಅವರು ಕಾಡಾನೆ ದಾಳಿಯಿಂದ ಕೃಷಿ ಫಸಲು ನಾಶಪಡಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆಯಿಂದ ರೈತರ ಕೃಷಿ ಫಸಲು ನಾಶಕ್ಕೆ ಹೆಚ್ಚು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜು ಸುಬ್ರಮಣಿ ಅವರು, ಜಿಲ್ಲಾ ಪಂಚಾಯತ್ ಕ್ಷೇತ್ರದ ಹೊಸೂರು, ಬೆಟ್ಟಗೇರಿ, ಕಳತ್ಮಾಡು, ಬಿಳುಗುಂದ, ಅಮ್ಮತ್ತಿ, ಹೊಸ್ಕೇರಿ ,ಮೇಕೂರು, ಪಾಲಿಬೆಟ್ಟ ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಹಲವು ವರ್ಷಗಳಿಂದ ಬೆಳೆಗಾರರು, ಕಾರ್ಮಿಕರು, ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಛತ್ತೀಸ್‍ಗಢ ರಾಜ್ಯದಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮಕೈಗೊಂಡಿರುವ ಮಾದರಿಯಲ್ಲೇ ಜಿಲ್ಲೆಯಲ್ಲೂ ಅನುಸರಿಸಬೇಕಾಗಿರುವದರಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಾಶ್ವತ ಯೋಜನೆಯ ಬಗ್ಗೆ ಮನವಿ ಸಲ್ಲಿಸಬೇಕಾಗಿದೆ ಎಂದರು.

ತಾಲೂಕು ಪಂಚಾಯತ್ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ. ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ರೈತರು ಬೆಳೆದ ಕೃಷಿ ಫಸಲು ನಾಶವಾಗುತ್ತಿದೆ. ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮವಹಿಸದಿದ್ದಲ್ಲಿ ಬೆಳೆಗಾರರೊಂದಿಗೆ ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಿಚಿಣ್ಣಪ್ಪ, ಸ್ಥಳೀಯರಾದ ನವೀನ್, ಈಶ್ವರ ಕೂಡ ಕಾಡಾನೆ ಹಾವಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News