ಬೆಟ್ಟದಮನೆ: ಸಮರ್ಪಕ ಪಡಿತರ ವಿತರಣೆಗೆ ಗ್ರಾಮಸ್ಥರ ಆಗ್ರಹ

Update: 2019-09-13 18:32 GMT

ಮೂಡಿಗೆರೆ, ಸೆ.13: ತಾಲೂಕಿನ ಕಿರುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಟದಮನೆ ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದ ಸ್ಥಳಾಂತರಗೊಂಡಿರುವ ನ್ಯಾಯಬೆಲೆ ಅಂಗಡಿಯನ್ನು ಕೂಡಲೇ ಪುನಾರಂಭಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಬೆಟ್ಟದಮನೆ ಗ್ರಾಮದಲ್ಲಿ ಸಾರ್ವಜನಿಕರ ಪಡಿತರ ವಿತರಣಾ ವ್ಯವಸ್ಥೆ ಸಂಬಂಧ ನಡೆದ ವಿಶೇಷ ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ನೆಟ್‍ವರ್ಕ್ ಸಮಸ್ಯೆಯ ನೆಪವೊಡ್ಡಿ ಜನ್ನಾಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ಇದರಿಂದಾಗಿ ಬೆಟ್ಟದಮನೆ ಗ್ರಾಮಸ್ಥರು ಅನಗತ್ಯವಾಗಿ ಜನ್ನಾಪುರ ಗ್ರಾಮಕ್ಕೆ ಅಲೆಯಬೇಕಾಗಿದೆ. ಅಲ್ಲದೇ ಪಡಿತರ ವಸ್ತುಗಳನ್ನು ತರಲು ಖರ್ಚಿನ ಹೊರೆಯನ್ನೂ ತೆರಬೇಕಾಗಿದೆ. ಆದ್ದರಿಂದ ನ್ಯಾಯಬೆಲೆ ಅಂಗಡಿಯನ್ನು ಮತ್ತೆ ಬೆಟ್ಟದ ಮನೆ ಗ್ರಾಮದಲ್ಲೇ ಆರಂಭಿಸಬೇಕೆಂದು ಆಗ್ರಹಿಸಿದರು. 

ಈ ವೇಳೆ ಮಾತನಾಡಿದ ಕಿರುಗುಂದ ಗ್ರಾಪಂ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್, ಕಿರುಗುಂದ ಗ್ರಾಪಂ ಕಚೇರಿ ಕಟ್ಟಡದ ದುರಸ್ತಿ ಕೆಲಸ ಮಾಡಲಾಗುತ್ತಿದ್ದು, ಇನ್ನೆರೆಡು ತಿಂಗಳಲ್ಲಿ ಕಟ್ಟಡ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. ಆ ಬಳಿಕ ಈ ಕಟ್ಟಡದಲ್ಲೇ ನ್ಯಾಯಬೆಲೆ ಅಂಗಡಿಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಕಿರುಗುಂದ ಗ್ರಾಪಂ ಮಾಜಿ ಅಧ್ಯಕ್ಷ ಹೇಮಶೇಖರ್ ಮಾತನಾಡಿ, ಬೆಟ್ಟದಮನೆ ಗ್ರಾಮದಲ್ಲಿ ಸಮರ್ಪಕವಾಗಿ ಪಡಿತರ ವಿತರಣೆ ಆಗದಿರುವ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ದೂರು ನೀಡಿದ ಪರಿಣಾಮ ನ್ಯಾಯಬೆಲೆ ಅಂಗಡಿಯಲ್ಲಿ ಕೊಂಚ ಸುಧಾರಣೆ ಆಗಿದೆ ಎಂದ ಅವರು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಕಿರುಗುಂದ ಗ್ರಾಮದಲ್ಲಿ ಕಟ್ಟಡ ದುರಸ್ತಿ ಪೂರ್ಣಗೊಂಡ ಕೂಡಲೇ ಪಡಿತರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. ಇದರಿಂದ ಬೆಟ್ಟದಮನೆ ಗ್ರಾಮಸ್ಥರಿಗೆ ಗ್ರಾಮದ ಸಮೀಪದಲ್ಲೇ ಪಡಿತರ ನೀಡಲು ಅನುಕೂಲವಾಗುತ್ತದೆ. ಸಾರ್ವಜನಿಕರು ಪಡಿತರ ಚೀಟಿಗಳಲ್ಲಿ ಲೋಪದೋಷಗಳಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮ ಆಯೋಜಕರಾದ ಹಾಸನ ಸಿಎಂಎಸ್‍ಎಸ್ ಸೇವಾ ಸಂಸ್ಥೆಯ ಸಂಯೋಜಕ ಪ್ರವೀಣ್ ಮಾತನಾಡಿ, ಪಡಿತರ ವಿತರಣಾ ವ್ಯವಸ್ಥೆ, ಪಡಿತರ ವ್ಯವಸ್ಥೆಯ ನಿಯಮಗಳು, ಜನರ ಸಹಕಾರ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಪಡಿತರ ವಿತರಕ ಪ್ರಜ್ವಲ್ ಮಾತನಾಡಿ, ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಕಿರುಗುಂದ ಗ್ರಾಪಂ ಪಿಡಿಒ ಸಾಹಿತ್ಯ, ಸದಸ್ಯರಾದ ಗೋಪಮ್ಮ, ಪ್ರಶಾಂತ್, ವಿಂದ್ಯಾಶ್ರೀ, ಗ್ರಾಮಸ್ತರಾದ ದೇವರಾಜ್, ಜಯಪ್ಪ, ಗನೇಶ್‍ಗೌಡ ಮತ್ತಿತರರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News