ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-09-14 18:01 GMT

ಬೆಂಗಳೂರು, ಸೆ. 14: ಕೇಂದ್ರ ಸರಕಾರ ‘ಹಿಂದಿ ದಿವಸ್’ ಆಚರಣೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕನ್ನಡ ಭಾಷಾ ದಿವಸ್ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ, ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪು ಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು. ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧವೂ ಇದೆ’ ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಆಕ್ಷೇಪಿಸಿದ್ದಾರೆ.

ಕನ್ನಡ ಭಾಷಾ ದಿವಸ್ ಏಕಿಲ್ಲ: ‘ಇಂದು ದೇಶದಾದ್ಯಂತ ಕೇಂದ್ರ ಸರಕಾರ ’ಹಿಂದಿ ದಿವಸ್’ ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ. ಹಿಂದಿ ಏರಿಕೆಯನ್ನು ಕೂಡಲೇ ನಿಲ್ಲಿಸಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟರ್ ಮೂಲಕ ಒತ್ತಾಯ ಮಾಡಿದ್ದಾರೆ.

‘ಅಮಿತ್ ಶಾ ಅವರೇ, ಭಾರತ ಜಾಗತಿಕ ಮಟ್ಟದಲ್ಲಿ ಯಾವತ್ತೂ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯಿಂದ ಗುರುತಿಸಿಕೊಂಡ ದೇಶವಲ್ಲ. ಬಹುಭಾಷೆ, ಬಹುಧರ್ಮ, ಬಹು ಸಂಸ್ಕೃತಿಯಂತಹ ವೈವಿಧ್ಯತೆಯೇ ಬಹುತ್ವ ಭಾರತದ ಜೀವಾಳ. ಆರೆಸೆಸ್ಸ್ ಹಿಡನ್ ಅಜೆಂಡಾ ಜಾರಿಗೆ, ಕೀಳುಮಟ್ಟದ ರಾಜಕೀಯಕ್ಕೆ, ದೇಶದ ಅಸ್ತಿತ್ವವನ್ನೆ ಬಿಜೆಪಿ ಬಲಿ ಕೊಡಬಾರದು’ ಎಂದು ಕೆಪಿಸಿಸಿ ಟ್ವೀಟ್ ಮಾಡಿದ್ದು, ‘ಹಿಂದಿ ದಿವಸ್’ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಒಕ್ಕೂಟಕ್ಕೆ ಅಪಮಾನ: ‘29 ರಾಜ್ಯಗಳು ಒಪ್ಪಿ, ಸೇರಿ ಭಾರತ ಒಕ್ಕೂಟ ಆಗಿರುವಾಗ ಕೇವಲ ಒಂದು ಭಾಷೆಯನ್ನು ಎತ್ತಿ ಹಿಡಿಯುವುದು ಒಕ್ಕೂಟಕ್ಕೆ ಮಾಡುವ ಘೋರ ಅಪಮಾನ, ದೇಶದ 22 ಅಧಿಕೃತ ಭಾಷೆಗಳನ್ನು ಸೇರಿಸಿ ಭಾರತ್ ಭಾಷಾ ದಿವಸ್ ಆಚರಣೆ ಮಾಡುವ. ಇಂಡಿಯಾ ದೇಶವೇ ಹೊರತು ‘ಹಿಂದಿ’ಯಾ ದೇಶವಲ್ಲ’ ಎಂದು ಜಾಲಣತಾಣದಲ್ಲಿ ‘ಹಿಂದಿ ದಿವಸ್’ಗೆ ವಿರೋಧ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News