ಮೈಸೂರು ದಸರಾ ಉತ್ಸವ: ಮುಖ್ಯಮಂತ್ರಿ ಯಡಿಯೂರಪ್ಪಗೆ ಅಧಿಕೃತ ಆಹ್ವಾನ

Update: 2019-09-14 12:29 GMT

ಬೆಂಗಳೂರು, ಸೆ. 14: ಮೈಸೂರಿನ ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ವಸತಿ ಸಚಿವರೂ ಆಗಿರುವ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿ.ಸೋಮಣ್ಣ ಅಧಿಕೃತವಾಗಿ ಆಹ್ವಾನಿಸಿದರು.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮೈಸೂರು ಪೇಟಾ, ರೇಶ್ಮೆ ಶಾಲು ಮತ್ತು ವಿಶೇಷ ಪುಷ್ಪಮಾಲೆಯೊಂದಿಗೆ ಸನ್ಮಾನಿಸುವ ಮೂಲಕ ಉತ್ಸವಕ್ಕೆ ಆಗಮಿಸುವಂತೆ ಕೋರಿದರು. ಈ ವೇಳೆ ಮೈಸೂರು ಮೇಯರ್ ಪುಷ್ಪಲತಾ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವಿರ್ ಸೇಠ್, ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಹಾಜರಿದ್ದರು.

ಸೆ.29ಕ್ಕೆ ಉದ್ಘಾಟನೆ: ಮೈಸೂರು ದಸರಾ ಸ್ವಾಗತ ಸಮಿತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ಕೊಟ್ಟಿದ್ದೇವೆ. ಮೈಸೂರಿನ ಎಲ್ಲ ಪಕ್ಷಗಳ ಶಾಸಕರಿಗೂ ಆಹ್ವಾನ ನೀಡಲಾಗಿದೆ. ಸೆ. 29ರ ಬೆಳಗ್ಗೆ 9 ಗಂಟೆಗೆ ನಾಡದೇವತೆ ಚಾಮುಂಡೇಶ್ವರಿ ಪೂಜೆ ಬಳಿಕ ದಸರಾ ಉತ್ಸವ ಉದ್ಘಾಟನೆ ನಡೆಯಲಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ಶನಿವಾರ ಸಿಎಂಗೆ ಆಹ್ವಾನ ನೀಡಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸೆ.29ರಿಂದ ಅಕ್ಟೋಬರ್ 8ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ರಾಜ್ಯಪಾಲ, ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಹಲವು ಗಣ್ಯರಿಗೆ ಈಗಗಾಲೇ ಆಹ್ವಾನ ನೀಡಲಾಗಿದೆ ಎಂದರು.

ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ನಡೆಯುವಂತೆ ಯೋಜಿಸಿದ್ದೇವೆ. ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಅವರನ್ನು ಆಹ್ವಾನಿಸಲು ನಿಯೋಗ ತೆರಳಿದೆ. ಪಿ.ವಿ.ಸಿಂಧೂ ಅವರು ಅತಿಥಿಯಾಗಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಶಾಸಕ ರಾಮದಾಸ್‌ಗೆ ಉತ್ಸವ ಸಮಿತಿ ಬೇರೆ ಜವಾಬ್ದಾರಿ ನೀಡಿದ್ದು, ಅವರಿಂದು ಆಗಮಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News