ಬೆಂಕಿ ತಗಲಿ ಹೊತ್ತಿ ಉರಿದ ಖಾಸಗಿ ಬಸ್

Update: 2019-09-14 14:00 GMT

ತುಮಕೂರು,ಸೆ.14: ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಖಾಸಗಿ ರಾಯಲ್ ಟ್ರಾವೆಲ್ಸ್ ಬಸ್ಸೊಂದು ಹೊತ್ತಿ ಉರಿದ ಘಟನೆ ನ್ಯಾಷನಲ್ ಹೈವೆ ಊರುಕೇರೆಯಲ್ಲಿ ನಡೆದಿದೆ.

ಮುಂಜಾನೆ 6 ಗಂಟೆ ಸಮಯದಲ್ಲಿ ಸ್ಲೀಪರ್ ಬಸ್ಸಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನಿಂದ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಬಸ್ಸಿನಿಂದ ಜಿಗಿದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಜಾಪುರದ ನೀಲಮ್ಮ ಎಂಬಾಕೆಗೆ ತೀವ್ರ ಸುಟ್ಟಗಾಯಗಳಾಗಿವೆ. ಚಿಕಿತ್ಸೆಗಾಗಿ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 30 ಪ್ರಯಾಣಿಕರ ಪೈಕಿ ಆರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬಸ್ ಚಾರ್ಜ್ ಇಲ್ಲ: ಬಸ್ಸು ಸುಟ್ಟು ಹೋದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರ ಬ್ಯಾಗ್ ಸಮೇತ ಮೊಬೈಲ್ ಗಳು ಸುಟ್ಟುಹೋಗಿವೆ. ಇದರಿಂದ ಗಾಯಾಳುಗಳು ಮನೆಗೆ ಹಿಂದಿರುಗಲು ಹಣ ಕೂಡ ಇಲ್ಲದಂತಾಗಿದೆ. ಕೆಲವರು ಬಟ್ಟೆಯಿಲ್ಲದೆ ಒಳಉಡುಪಿನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಓಡಿಹೋದ ಚಾಲಕ: ಬಸ್ ಗೆ ಬೆಂಕಿ ತಗಲಿದ ತಕ್ಷಣ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ. ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಧು, ಸಬ್ ಇನ್ಸ್ ಪೆಕ್ಟರ್ ಲಕ್ಷಯ್ಯ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಜಿಲ್ಲಾ ಅಗ್ನಿಶಾಮಕಾಧಿಕಾರಿ ಮಹಲಿಂಗಪ್ಪ ಎಸ್.ಲಂಗೋಟಿ ನೇತೃತ್ವದ ತಂಡ ಬೆಂಕಿ ನಂದಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News