ಈ ರಾಜ್ಯದಲ್ಲಿನ್ನು ದೇವಸ್ಥಾನದ ಆಡಳಿತ ಮಂಡಳಿಯ ಹುದ್ದೆಗಳಲ್ಲಿ ಶೇ.50 ಮೀಸಲಾತಿ

Update: 2019-09-14 14:30 GMT

 ಹೈದರಾಬಾದ್, ಸೆ.14: ಎಲ್ಲಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದತ್ತಿ ಸಂಸ್ಥೆಗಳಲ್ಲಿ ಶೇ.50 ಹುದ್ದೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರ ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಿರಿಸಿ ಆಂಧ್ರಪ್ರದೇಶ ಸರಕಾರ ಆದೇಶ ಜಾರಿಗೊಳಿಸಿದೆ.

ಹಿಂದು ಧಾರ್ಮಿಕ ಸಂಸ್ಥೆಗಳಲ್ಲಿ ಜಾತಿ ಮತ್ತು ಲಿಂಗದ ಆಧಾರದಲ್ಲಿ ಸರಕಾರ ಮೀಸಲಾತಿ ಕಲ್ಪಿಸಿರುವುದು ಇದೇ ಮೊದಲಾಗಿದೆ. ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ಈ ಭರವಸೆ ನೀಡಿದ್ದರು. ‘ಆಂಧ್ರಪ್ರದೇಶ ಚಾರಿಟೇಬಲ್ ಆ್ಯಂಡ್ ಹಿಂದು ರಿಲೀಜಿಯಸ್ ಇನ್‌ಸ್ಟಿಟ್ಯೂಷನ್ಸ್ ಆ್ಯಂಡ್ ಎಂಡೋಮೆಂಟ್ಸ್ ಅಪಾಯಿಂಟ್‌ಮೆಂಟ್ ಆಫ್ ಟ್ರಸ್ಟೀಸ್ ರೂಲ್ಸ್, 1987’ಕ್ಕೆ ತಿದ್ದುಪಡಿ ತಂದು ಸರಕಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ತಿರುಮಲ ತಿರುಪತಿ ದೇವಸ್ಥಾನಂನ ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆಯನ್ನು 19ರಿಂದ 25ಕ್ಕೇರಿಸಲು ಗುರುವಾರ ಸಚಿವ ಸಂಪುಟ ನಿರ್ಧರಿಸಿದೆ. ಆಡಳಿತ ಮಂಡಳಿ ಸದಸ್ಯರನ್ನಾಗಿ ಇತರ ರಾಜ್ಯದವರನ್ನೂ ನೇಮಿಸಬೇಕಿರುವುದರಿಂದ ಮೀಸಲಾತಿ ನಿಯಮದಿಂದ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಗೆ ವಿನಾಯಿತಿ ದೊರಕುವ ಸಾಧ್ಯತೆಯಿದೆ. ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇತರ ಧರ್ಮದ ಬಗ್ಗೆ ವಿಶ್ವಾಸ ಇರುವ ದುರ್ಬಲ ವರ್ಗದ ಜನರನ್ನು ನೇಮಿಸುವುದಕ್ಕೆ ಆಕ್ಷೇಪವಿದೆ. ಅಲ್ಲದೆ ರಾಜಕಾರಣಿಗಳು, ಉದ್ಯಮಿಗಳು ಅಥವಾ ಸೆಲೆಬ್ರಿಟಿಗಳಿಗೆ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡಬಾರದು ಎಂದು ದೇವಾಲಯಗಳ ಸಂರಕ್ಷಣಾ ಸಮಿತಿಯ ಸಂಯೋಜಕ ಸಿ ರಂಗರಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News