ಮತ್ತೆ ಐನ್ ಸ್ಟೀನ್ ಹೆಸರು ಹೇಳಿದ ಗೋಯಲ್: ಈ ಬಾರಿ ಕೇಂದ್ರ ಸಚಿವರು ಹೇಳಿದ್ದೇನು?

Update: 2019-09-14 14:38 GMT

ಹೊಸದಿಲ್ಲಿ,ಸೆ.14: ಭಾರತದ ಸದ್ಯ ಆರ್ಥಿಕ ಪರಿಸ್ಥಿತಿಯನ್ನು ಸಮರ್ಥಿಸುವ ಭರದಲ್ಲಿ ಗುರುತ್ವಾಕರ್ಷಣೆಯನ್ನು ಕಂಡುಹಿಡಿದ ಶ್ರೇಯವನ್ನು ಆಲ್ಬರ್ಟ್ ಐನ್ ಸ್ಟೀನ್ ಗೆ ನೀಡಿದ್ದ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕೊನೆಗೂ ತನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಗುರುತ್ವಾಕರ್ಷಣೆಯನ್ನು ಕಂಡುಹಿಡಿದಿದ್ದು ಐಸಾಕ್ ನ್ಯೂಟನ್ ಆದರೆ. ಆರ್ಥಿಕತೆಯ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುವ ವೇಳೆ, ಗಣಿತ ಎಂದೂ ಐನ್ ಸ್ಟೀನ್ ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ನೆರವಾಗಲಿಲ್ಲ ಎಂದು ಹೇಳುವ ಮೂಲಕ ಗೋಯಲ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಮತ್ತು ವ್ಯಂಗ್ಯಕ್ಕೆ ಒಳಗಾಗಿದ್ದರು. ಆದರೆ ಸದ್ಯ ತಾನು ಮಾಡಿರುವ ಪ್ರಮಾದದ ಅರಿವಾಗಿರುವ ಕೇಂದ್ರ ಸಚಿವ, ತನ್ನ ತಪ್ಪನ್ನು ಸಮರ್ಥಿಸಲೂ ಐನ್ ಸ್ಟೀನ್ ಅವರ ಹೇಳಿಕೆಯನ್ನೇ ಬಳಸಿದ್ದಾರೆ.

ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಗೋಯಲ್, ನಮಗೆಲ್ಲರಿಗೂ ತಪ್ಪು ಮಾಡುವ ಅವಕಾಶ ಸಿಗುತ್ತದೆ. ನಾನು ನ್ಯೂಟನ್ ಬದಲಿಗೆ ಐನ್ ಸ್ಟೀನ್ ಎಂದು ಹೇಳಿದ್ದೆ. ಆದರೆ, ಎಂದೂ ತಪ್ಪೇ ಮಾಡದ ವ್ಯಕ್ತಿ ಯಾವತ್ತೂ ಹೊಸತನ್ನು ಪ್ರಯತ್ನಿಸಲು ಸಾಧ್ಯವಿಲ್ಲ, ಎಂದು ಅದೇ ಐನ್ ಸ್ಟೀನ್ ಹೇಳಿದ್ದಾರೆ ಎಂದು ತನ್ನ ತಪ್ಪನ್ನು ಸಮರ್ಥಿಸಿಕೊಂಡಿದ್ದಾರೆ.

ನಾನು ತಪ್ಪು ಮಾಡಲು ಭಯಪಡುವ ವ್ಯಕ್ತಿಯಲ್ಲ. ನನ್ನ ತಪ್ಪಿನ ಅರಿವಾದ ಕ್ಷಣವೇ ನಾನು ಕ್ಷಮೆ ಕೇಳಿದ್ದೇನೆ ಎಂದು ಪಿಯೂಶ್ ಗೋಯಲ್ ತಿಳಿಸಿದ್ದಾರೆ. ತಾನು ಎರಡು ದಿನಗಳ ಹಿಂದೆ ಏನನ್ನು ಹೇಳಲು ಬಯಸಿದ್ದೆ ಎಂದು ವಿವರಿಸಿದ ಸಚಿವ, ದೇಶವನ್ನು ಮುಂದಿನ ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡಲು ಆವಿಷ್ಕಾರಿ ದಾರಿಗಳನ್ನು ಹುಡುಕುವ ಅಗತ್ಯದ ಬಗ್ಗೆ ನಾನು ಮಾತನಾಡುತ್ತಿದ್ದೆ. ದುರದೃಷ್ಟವಶಾತ್, ಆದರೆ ಮೂಲ ವಿಷಯ ಹಿಂದಕ್ಕೆ ಸರಿದು ನಾನು ಮಾಡಿದ ಪ್ರಮಾದದ ಮೇಲೆಯೇ ಗಮನಸೆಳೆಯಲಾಯಿತು ಎಂದು ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News