ಚುನಾಯಿತ ಪ್ರತಿನಿಧಿಗಳಿಲ್ಲದೆ ಚಿಕ್ಕಮಗಳೂರು ನಗರಸಭೆ ಆಡಳಿತ ನಿಷ್ಟ್ರೀಯ

Update: 2019-09-14 17:02 GMT

►ವರ್ಷ ಕಳೆಯುತ್ತಿದ್ದರೂ ನಗರಸಭೆ ಚುನಾವಣೆ ಮರೀಚಿಕೆ

ಚಿಕ್ಕಮಗಳೂರು, ಸೆ.14: ಇಲ್ಲಿನ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ ಪೂರ್ಣಗೊಂಡಿದ್ದು, ಇನ್ನೂ ಚುನಾವಣೆ ನಡೆಯದ ಪರಿಣಾಮ ನಗರಸಭೆ ಆಯುಕ್ತರೂ ಸೇರಿದಂತೆ ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ನಗರಸಭೆಯ ನಿಷ್ಕ್ರಿಯತೆಯಿಂದಾಗಿ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಜನರು ವಿವಿಧ ಸಮಸ್ಯೆಗಳಿಂದ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ನಾಗರಿಕರ ಬವಣೆಗಳ ಕೂಗು ಅರಣ್ಯರೋದನವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಚಿಕ್ಕಮಗಳೂರು ನಗರದ ನಗರಸಭೆ ಸದಸ್ಯರ ಅಧಿಕಾರವಧಿ ಪೂರ್ಣಗೊಂಡು ವರ್ಷ ಕಳೆಯುತ್ತಿದೆ. ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳ ಮೀಸಲು ವಿಚಾರವಾಗಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪೈಕಿ ಚಿಕ್ಕಮಗಳೂರು ನಗರಸಭೆಗೆ ಚುನಾವಣೆ ಬಾಕಿ ಉಳಿದುಕೊಂಡಿತ್ತು. ಇತ್ತೀಚೆಗೆ ನ್ಯಾಯಾಲಯದಲ್ಲಿ ಈ ಪ್ರಕರಣ ಇತ್ಯರ್ಥಗೊಂಡಿದ್ದು, ನಗರಸಭೆ ಮೀಸಲಿನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಅದೇಶ ನೀಡಿದೆ. ಈ ಆದೇಶ ಹೊರಬಿದ್ದು, ಮೂರು ತಿಂಗಳು ಕಳೆದಿದ್ದರೂ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ.

ಸದ್ಯ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದಿರುವುದರಿಂದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗೆ ನಗರಸಭೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲದಿರುವುದರಿಂದ ನಗರಸಭೆ ಆಡಳಿತ ನಿಷ್ಕ್ರೀಯಗೊಂಡಿದೆ. ನಗರಸಭೆಯ 31 ವಾರ್ಡ್‍ಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿತ್ತಿವೆ, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ, ನಗರಸಭೆ ಆಯುಕ್ತರು ಎಸಿ ಕಚೇರಿಯಲ್ಲಿ ಕುಳಿತು ಏಜೆಂಟರುಗಳನ್ನು ಕೈಗೊಂಬೆಗಳನ್ನಾಗಿಸಿಕೊಂಡು ಕೆಲಸ ಮಾಡಿಸುತ್ತಿರುವುದರಿಂದ ಇವರು ನಾಗರಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪಗಳು ಇದೀಗ ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಚಿಕ್ಕಮಗಳೂರು ಪಂಚ ನದಿಗಳನ್ನು ಹೊಂದಿರುವ ಜಿಲ್ಲೆಯಾಗಿದ್ದರೂ ನಗರದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಪ್ರತಿದಿನ ಪರದಾಡುತ್ತಿದ್ದಾರೆ. ಪಂಚನದಿಗಳಿದ್ದರೂ ಪಕ್ಕದ ಹಾಸನ ಜಿಲ್ಲೆಯಲ್ಲಿರುವ ಯಗಚಿ ಡ್ಯಾಂ ನೀರು ನಗರಕ್ಕೆ ಪೂರೈಕೆಯಾಗುತ್ತಿದೆ. ಆದರೆ ನಗರಸಭೆ ನಗರದ ವಿವಿಧ ಬಡಾವಣೆಗಳಿಗೆ ಸರಬರಾಜು ಮಾಡುತ್ತಿರುವ ಈ ನೀರನ್ನು ಶುದ್ಧೀಕರಿಸದೇ ಪೂರೈಕೆ ಮಾಡುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದ್ದು, ಕಲುಷಿತ ನೀರು ಪೂರೈಕೆ ವಿರುದ್ಧ ಇತ್ತೀಚೆಗೆ ನಾಗರಿಕರು ಬೀದಿಗಿಳಿದು ಹೋರಾಟ ಮಾಡಿದ್ದಾರಾದರೂ ಕಲುಷಿತ ನೀರು ಪೂರೈಕೆ ಮಾತ್ರ ನಿಂತಿಲ್ಲ. ನಗರದ ರಾಮನಹಳ್ಳಿಯಲ್ಲಿರುವ ನೀರು ಶುದ್ಧೀಕರಣ ಘಟಕ ಶಿಥಿಲಾವಸ್ಥೆಯ ಹಂತದಲ್ಲಿದ್ದು, ಈ ಘಟಕ ಹೂಳಿನಿಂದ ತುಂಬಿಕೊಂಡಿರುವುದರಿಂದ ಶುದ್ಧೀಕರಣ ಘಟಕದ ದುರಸ್ತಿ ಹಾಗೂ ಸ್ವಚ್ಛ ಕಾರ್ಯಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರಾದರೂ ನಗರದಕ್ಕೆ ಕಲುಷಿತ ನೀರು ಪೂರೈಕೆಯಾಗುವುದು ಮಾತ್ರ ಇಂದಿಗೂ ನಿಂತಿಲ್ಲ. ಇನ್ನು ನಗರದ ಎಲ್ಲ ವಾರ್ಡ್‍ಗಳಿಗೆ ವಾರದಲ್ಲಿ ಎರಡು ದಿನಗಳ ಕಾಲ ಮಾತ್ರ ನೀರು ಪೂರೈಕೆ ಮಾಡುತ್ತಿರುವುದರಿಂದ ನಾಗರಿಕರು ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದು, ಕೆಲ ವಾರ್ಡ್‍ಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದ ಪ್ರಮುಖ ರಸ್ತೆಗಳು ಗೊಟರುಗಳಿಂದ ತುಂಬಿದ್ದು, ಈ ರಸ್ತೆಗಳಲ್ಲಿ ವಾಹನಗಳ ಸಂಚಾರ ದುಸ್ತರವಾಗಿ ಮಾರ್ಪಟ್ಟಿದೆ. ನಗರಸಭೆ ವ್ಯಾಪ್ತಿಯ ರಸ್ತೆಗಳನ್ನು ಈ ಹಿಂದೆ ನಗರಸಭೆಯಲ್ಲಿ ಆಡಳಿತದಲ್ಲಿದ್ದ ಜನಪ್ರತಿನಿಧಿಗಳು ಕೋಟ್ಯಾಂತರ ರೂ.ವೆಚ್ಚ ಮಾಡಿ ಗುಂಡಿ ಮುಚ್ಚಿದ್ದರು. ಆದರೆ ಗುತ್ತಿಗೆದಾರ ಹಾಗೂ ಜನಪ್ರತಿನಿಧಿಗಳ ಕಳಪೆ ನಿರ್ವಹಣೆಯಿಂದಾಗಿ ಒಂದೇ ತಿಂಗಳಿಗೆ ಈ ರಸ್ತೆಗಳು ಮತ್ತೆ ಗುಂಡಿಮಯವಾಗಿವೆ. ಇನ್ನು ನಗರದ ವಿವಿಧ ವಾರ್ಡ್‍ಗಳಲ್ಲಿ ಯುಜಿಡಿ, ಪೈಪ್‍ಲೈನ್, ಚರಂಡಿ ಕಾಮಗಾರಿಗಳ ಹೆಸರಿನಲ್ಲಿ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದ್ದ ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ಈ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸಕ್ಕೆ ನಗರಸಭೆ ಇನ್ನೂ ಕೈಹಾಕಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಗರಸಭೆ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿರುವ ಚರಂಡಿಗಳು ಕಸದ ತ್ಯಾಜ್ಯ ತುಂಬಿಕೊಂಡು ಕೊಳಚೆ ನೀರು ಸರಾಗವಾಗಿ ಹರಿಯದೇ ಸೊಳ್ಳೆಗಳ ಆಶ್ರಯತಾಣವಾಗಿ ಮಾರ್ಪಟ್ಟಿವೆ. ಚರಂಡಿಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದ ನಗರಸಭೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮ ನಗರದ ಸಂತೇಮೈದಾನ, ಮಾರ್ಕೆಟ್ ರಸ್ತೆ, ಶಂಕರಪುರ, ಕೋಟೆ, ಗೌರಿಕಾಲುವೆಯತಹ ವಾರ್ಡ್‍ಗಳ ರಸ್ತೆ ಬದಿಯಲ್ಲಿ ಸಾರ್ವಜನಿಕರು ಗಬ್ಬು ವಾಸನೆ ಸಹಿಸಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳ ಸ್ವಚ್ಛತೆ ನಿರ್ಲಕ್ಷಿಸಿರುವುದರಿಂದ ನಗರದ ಕೆಲ ಬಡಾವಣೆಗಳ ವ್ಯಾಪ್ತಿಯಲ್ಲಿ ಡೆಂಗ್‍ನಂತಹ ಮಾರಕ ರೋಗಗಳು ಹೆಚ್ಚುತ್ತಿವೆ.

ನಗರದ ಗಾಂಧಿನಗರ, ಕೋಟೆ, ಶಂಕರಪುರ, ಸಂತೇಮೈದಾನ, ವಿಜಯಪುರ, ಗೌರಿಕಾಲುವೆ ಮತ್ತಿತರ ಬಡಾವಣೆಗಳ ವ್ಯಾಪ್ತಿಯಲ್ಲಿ ಬೀದಿ ದೀಪಗಳಿಲ್ಲದೇ ಜನರು ರಾತ್ರಿ ವೇಳೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ತಿಂಗಳಲ್ಲಿ ಬಹುತೇಕ ದಿನಗಳಲ್ಲಿ ಬೀದಿದೀಪಗಳ ಬೆಳಕಿಲ್ಲದೇ ಜನರು ಕತ್ತಲೆ ಕೂಪದಲ್ಲಿ ದಿನದೂಡುತ್ತಿದ್ದರೆ, ಇನ್ನು ಕೆಲ ದಿನಗಳಲ್ಲಿ ಹಗಲಿನ ಹೊತ್ತಲ್ಲೇ ಬೀದಿದೀಪಗಳು ಉರಿಯುತ್ತಿರುತ್ತವೆ ಎಂದು ನಾಗರಿಕರು ದೂರುತ್ತಿದ್ದಾರೆ. ನಗರಸಭೆ ಇಂಜಿನಿಯರ್ ಗಳ ನಿರ್ಲಕ್ಷದಿಂದಾಗಿ ಬೀದಿದೀಪಗಳ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಮನಸೋಇಚ್ಛೆ ಕಾರ್ಯನಿರ್ವಹುತ್ತಿದ್ದು, ಬೀದಿದೀಪಗಳ ಪರಿಪಡಿಸಲು ಮನವಿ ಮಾಡಿದರೂ ಪ್ರಯೋಜನವಾಗುತಿಲ್ಲ ಎಂದು ಬಡಾವಣೆ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಇನ್ನು ಕಸ ವಿಲೇವಾರಿ ಸಮಸ್ಯೆ ನಗರಲ್ಲಿ ಬಿಗಡಾಯಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಕಸವಿಲೇವಾರಿಯನ್ನು ನಗರಸಭೆ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದು, ಈ ಸಂಸ್ಥೆ ಕಸವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕಸ ವಿಲೇವಾರಿಗೆ ನಗರದ ಪ್ರತೀ ಮನೆ, ಹೊಟೇಲ್, ಅಂಗಡಿ ಮುಂಗಟ್ಟುಗಳಿಂದ ನಿರ್ದಿಷ್ಟ ಶುಲ್ಕ ಪಡೆಯುವ ಈ ಸಂಸ್ಥೆ ಪ್ರತಿದಿನ ಕಸವಿಲೇವಾರಿ ಮಾಡಬೇಕಿದೆ. ಆದರೆ ಸಂಸ್ಥೆಯ ಸಿಬ್ಬಂದಿ ಮೇಲೆ ನಗರಸಭೆ ಅಧಿಕಾರಿಗಳ ಹಿಡಿತ ಇಲ್ಲದಿರುವುದರಿಂದ ಬಡಾವಣೆಗಳಿಂದ ಪ್ರತಿದಿನ ಕಸ ಸಾಗಣೆ ಮಾಡಲು ಬಾರದೇ ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಿ ಎಂದು ಸೂಚನೆ ನೀಡಲಾಗಿದ್ದರೂ ಸಂಸ್ಥೆಯ ಸಿಬ್ಬಂದಿ ಕೆಲ ವಾರ್ಡ್‍ಗಳಿಗೆ ಕಸವಿಂಗಡಣೆ ಮಾಡಲು ಚೀಲಗಳನ್ನೇ ನೀಡುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಹಸಿಕಸ, ಒಣಕಸ ವಿಂಗಡೆ ಮಾಡಿದರೂ ಕಸ ವಿಲೇವಾರಿಗೆ ಸಿಬ್ಬಂದಿ ಬಡಾವಣೆಗಳತ್ತ ಮುಖಹಾಕುತ್ತಿಲ್ಲ ಎಂಬ ದೂರುಗಳೂ ಕೇಳಿ ಬರುತ್ತಿದ್ದು, ಇದರ ಪರಿಣಾಮ ಸಾರ್ವಜನಿಕರು ನಗರದ ರಸ್ತೆಗಳ ಬದಿಗಳಲ್ಲೇ ಕಸ ಸುರಿಯುವ ಸ್ಥಿತಿ ನಿರ್ಮಾಣವಾಗಿ ಎಲ್ಲೆಡೆ ಕಸದ ರಾಶಿಗಳು ಕಂಡುಬರುತ್ತಿವೆ.

ಇದಲ್ಲದೇ ನಗರಸಭೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರ ಉದ್ಯಾನವನಗಳ ನಿರ್ವಹಣೆ ಇಲ್ಲದಂತಾಗಿದ್ದು, ಹಂದಿಗಳ ಆವಾಸಸ್ಥಾನಗಳಾಗಿ ಮಾರ್ಪಟ್ಟಿವೆ. ಕೆಲವೆಡೆ ಉದ್ಯಾನವನ ಬೇಲಿಯೇ ಇಲ್ಲವಾಗಿದ್ದು, ಜಾಗ ಒತ್ತುವರಿದಾರರ ಪಾಲಾಗುತ್ತಿದೆ. ನಗರೋತ್ಥಾನ ಯೋಜನೆ, ಅಮೃತ್‍ ಯೋಜನೆಯಡಿ ಒಳಚರಂಡಿ, ನಿರಂತರ ನೀರು ಪೂರೈಕೆಯಂತಹ ಯೋಜನೆಗಳು ಮಂಜೂರಾಗಿದ್ದು, ನಗರಸಭೆ ಅಧಿಕಾರಿಗಳು, ಶಾಸಕರ ನಿರ್ಲಕ್ಷದಿಂದಾಗಿ ಕಳೆದ 5 ವರ್ಷಗಳ ಹಿಂದೆಯೇ ಮಂಜೂರಾದ ಯೋಜನೆಗಳು ಇನ್ನೂ ಪೂರ್ಣಗೊಳ್ಳದೇ ಕುಂಟುತ್ತಾ ಸಾಗಿವೆ. ಈ ಯೋಜನೆಗಳ ಕಾಮಗಾರಿಗಳಿಗಾಗಿ ನಗರದ ಉತ್ತಮ ರಸ್ತೆಗಳನ್ನೇ ಅಗೆದು ಆದ್ವಾನ ಮಾಡಲಾಗಿದ್ದು, ನಗರಸಭೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಕ್ಷೇತ್ರದ ಶಾಸಕರಿಗೆ ನಾಗರಿಕರು ಪ್ರತಿದಿನ ಹಿಡಿಶಾಪಹಾಕುತ್ತಿದ್ದಾರೆ.

ಒಟ್ಟಾರೆ ಚುನಾಯಿತ ಪ್ರತಿನಿಧಿಗಳಿಲ್ಲದ ಚಿಕ್ಕಮಗಳೂರು ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯಿಂದಾಗಿ ನಗರದಾದ್ಯಂತ ಸಮಸ್ಯೆಗಳು ಹೆಚ್ಚುತ್ತಿದ್ದು, ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ನಿಷ್ಕ್ರಿಯಗೊಂಡಿರುವ ನಗರಸಭೆ ಆಡಳಿತಕ್ಕೆ ಇನ್ನಾದರೂ ಚುರುಕು ಮುಟ್ಟಿಸಬೇಕಿದೆ ಎಂಬುದು ನಾಗರಿಕರ ಆಶಯವಾಗಿದೆ.

ಚುನಾಯಿತ ಪ್ರತಿನಿಧಿಗಳಿಲ್ಲದ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸರಕಾರಿ ಕೆಲಸಗಳ ಒತ್ತಡದಿಂದಾಗಿ ನಗರಸಭೆಯತ್ತ ಹೆಚ್ಚು ತಲೆ ಹಾಕಿಲ್ಲ. ಅವರು ಇದುವರೆಗೂ ನಗರಸಭೆಯಲ್ಲಿ ಶಾಸಕರು ಭಾಗವಹಿಸಿದ್ದ ಒಂದು ಸಭೆಯಲ್ಲಿ ಮಾತ್ರ ಭಾಗವಹಿಸಿದ್ದರು. ಆ ಸಭೆಯಲ್ಲೂ ಅವರು ಅಧಿಕಾರಿಗಳ ವಿರುದ್ಧ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿದ್ದರೆಂದು ನಗರಸಭೆಯ ಸಿಬ್ಬಂದಿಯೇ ಮಾತನಾಡುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರಮಾಣಿಕ, ಜನಪರ ಇರುವ ಅಧಿಕಾರಿ ಎಂಬ ನಂಬಿಕೆ ಜಿಲ್ಲೆ ಹಾಗೂ ನಗರದ ನಾಗರಿಕರಲ್ಲಿದೆ. ಅತಿವೃಷ್ಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಗಲು ರಾತ್ರಿ ಎನ್ನದೇ ತಮ್ಮ ಅಧೀನ ಅಧಿಕಾರಿಗಳೊಂದಿಗೆ ಅವಿರತ ಶ್ರಮಿಸಿದ್ದರಿಂದಲೇ ಜಿಲ್ಲೆಯಲ್ಲಿ ಅತಿವೃಷ್ಟಿ ಸಂದರ್ಭ ಹೆಚ್ಚು ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಜನಪ್ರತಿನಿಧಗಳೂ ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರು ನಗರಸಭೆ ಅಧಿಕಾರಿಗಳನ್ನು ಹಿಡಿತಕ್ಕೆ ಪಡೆದು ಅಡಳಿತಕ್ಕೆ ಚುರುಕು ಮುಟ್ಟಿಸಿದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಮುಕ್ತಿ ಒದಗಿಸಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ.

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News