ಮಂಡ್ಯ: ಕೇಂದ್ರ ಸರಕಾರದ ಹಿಂದಿ ಹೇರಿಕೆ ವಿರೋಧಿಸಿ ಬೈಕ್ ರ‍್ಯಾಲಿ

Update: 2019-09-14 18:36 GMT

ಮಂಡ್ಯ, ಸೆ.14: ಕೇಂದ್ರ ಸರಕಾರ ಘೋಷಿಸಿರುವ ಹಿಂದಿ ದಿವಸವನ್ನು ವಿರೋಧಿಸಿ ಕರ್ನಾಟಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಲವಾರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ನಗರದ ರೈಲ್ವೆ ನಿಲ್ದಾಣದಿಂದ ಬೈಕ್ ರ‍್ಯಾಲಿ ಹೊರಟ ನೂರಾರು ಮಂದಿ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೇಟೆಬೀದಿ, ನೂರಡಿ ರಸ್ತೆ, ವಿ.ವಿ.ರಸ್ತೆ ಸೇರಿದಂತೆ ನಾನಾ ರಸ್ತೆಗಳಲ್ಲಿ ರ‍್ಯಾಲಿ ನಡೆಯಿತು.

ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ, ಚಿಂತಕ ಪ್ರೊ.ಹುಲ್ಕೆರೆ ಮಹಾದೇವು, ಕೇಂದ್ರ ಸರಕಾರದ ಹಿಂದಿ ಹೇರಿಕೆ ನೀತಿಯಿಂದ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷಿಗರಿಗೆ ಉದ್ಯೋಗ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು. ರೈಲ್ವೆ, ವಿಮಾನ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕ್ ಸೇರಿದಂತೆ ಕೇಂದ್ರ ಸರಕಾರದ ಇಲಾಖೆಗಳಲ್ಲಿ ಕನ್ನಡಿಗರೇ ಇಲ್ಲದಂತಾಗಿದೆ. ರೈಲ್ವೆ, ವಿಮಾನ ನಿಲ್ದಾಣ, ಬ್ಯಾಂಕ್‍ಗಳಲ್ಲಿ ಮಾತೃಭಾಷೆಯ ನಾಮಫಲಕಗಳೇ ಇಲ್ಲ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.

ಕಾವೇರಿ ಕಣಿವೆ ರೈತ ಒಕ್ಕೂಟದ ಸಂಚಾಲಕ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಕೇಂದ್ರ ಸರಕಾರ  ಸೆ.14ರಂದು ಹಿಂದಿ ದಿವಸ ಆಚರಣೆಗೆ ಘೋಷಿಸಿದೆ. ಆ ಮೂಲಕ ನಿಧಾನವಾಗಿ ರಾಜ್ಯಗಳ ಭಾಷೆಯ ಸ್ಥಾನದಲ್ಲಿ ಹಿಂದಿಯನ್ನು ಪ್ರತಿಷ್ಠಾಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದು ಫೆಡರಲ್ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದೆ. ಹಿಂದಿಯೊಂದೇ ರಾಷ್ಟ್ರಭಾಷೆಯಲ್ಲ, ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆಗಳು. ಇಂತಹ ನಡೆಗಳು ಭಾರತದ ವೈವಿಧ್ಯತೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಹಿಂದಿ ಹೇರಿಕೆಯಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಖಂಡಿಸಲು ಕನ್ನಡಪರರೆಲ್ಲರೂ ಒಗ್ಗೂಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ರ‍್ಯಾಲಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ನಗರಾಧ್ಯಕ್ಷ ಟಿ.ಕೆ.ಸೋಮಶೇಖರ್, ಕರ್ನಾಟಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂಪತ್‍ಕುಮಾರ್, ಗಾಣದಾಳು ಅಭಿಲಾಷ್, ಬೂದನೂರು ಸುನೀಲ್, ಪ್ರಕಾಶ್, ಗ್ರಾಪಂ ಸದಸ್ಯರಾದ ಕೀಲಾರ ಸೋಮಶೇಖರ, ಬೂದನೂರು ಸತೀಶ, ಇತರರು ಭಾಗವಹಿಸಿದ್ದರು.

ಹಕ್ಕೊತ್ತಾಯಗಳು:
ಕೇಂದ್ರ ಸರಕಾರ ಹಿಂದಿ ಹೇರಿಕೆ ನಿಲ್ಲಿಸಿ, ಹಿಂದಿ ಕಡ್ಡಾಯ ಕೈಬಿಡಬೇಕು. ಕರ್ನಾಟಕದಲ್ಲಿ ಉದ್ದಿಮೆ ಆರಂಭಿಸುವ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಬೇಕು. ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಹಾಗು ಕೇಂದ್ರ ಸರಕಾರದ ಇಲಾಖೆಗಳ ವಿಭಾಗೀಯ ಕಚೇರಿಗಳನ್ನು ಕರ್ನಾಟಕದಲ್ಲಿ ತೆರೆಯಬೇಕು. ಕರ್ನಾಟಕ ಕೇಂದ್ರಿತ ನೇಮಕಾತಿಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿತಿರುವುದನ್ನು ಮುಖ್ಯ ಮಾನದಂಡವನ್ನಾಗಿಸಬೇಕು. ಸಂವಿಧಾನದ 8ನೇ ಷೆಡ್ಯೂಲಿನಲ್ಲಿರುವ ಎಲ್ಲ 22 ಭಾಷೆಗಳ ಅಭಿವೃದ್ಧಿಗೆ ಹಣಕಾಸು ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒದಗಿಸಕೊಡಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News