ಹೌದು, ಅರ್ಧ ಯುದ್ಧವನ್ನು ನಾವು ಸೋತಿದ್ದೇವೆ!

Update: 2019-09-16 04:38 GMT

‘ರೈಲ್ವೆ, ಬ್ಯಾಂಕಿಂಗ್’ ಕ್ಷೇತ್ರಗಳಲ್ಲಿ ಹಿಂದಿ ಭಾಷಿಗರೇ ತುಂಬಿಕೊಂಡಿರುವುದು ಒಂದು ಆಕಸ್ಮಿಕ ಅಲ್ಲ. ಕರ್ನಾಟಕದಲ್ಲಿರುವ ಯಾವುದೇ ಬ್ಯಾಂಕ್‌ಗಳು ‘ಹಿಂದಿ ಭಾಷೆ ದಿನಾಚರಣೆ’ಗೆ ವಿಶೇಷ ಆದ್ಯತೆಗಳನ್ನು ನೀಡುತ್ತಿರುವುದು ಯಾಕೆ ಎಂಬ ಪ್ರಶ್ನೆಯಲ್ಲೇ ಎಲ್ಲವು ಬಚ್ಚಿಟ್ಟುಕೊಂಡಿದೆ. ಪ್ರಾದೇಶಿಕತೆಯ ಮೇಲೆ ಉತ್ತರ ಭಾರತ ತನ್ನ ನಿಯಂತ್ರಣಗಳನ್ನು ಸಾಧಿಸಲು, ರೈಲ್ವೆ, ಬ್ಯಾಂಕಿಂಗ್‌ನಂತಹ ಕ್ಷೇತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಂದಿದೆ. ಇದು ಯಾವ ಹಂತ ತಲುಪಿತೆಂದರೆ ಕರ್ನಾಟಕದ ನೆಲದಲ್ಲಿ ಸ್ಥಾಪನೆಯಾದ ಬ್ಯಾಂಕುಗಳನ್ನೇ ಆಪೋಷನ ತೆಗೆದುಕೊಳ್ಳುವವರೆಗೆ. ವಿಜಯ ಬ್ಯಾಂಕ್ ಗುಜರಾತಿನ ಬರೋಡಾ ಬ್ಯಾಂಕ್ ಆಗಿ ಬದಲಾಯಿತು. ಮೈಸೂರು ಬ್ಯಾಂಕ್ ಎಸ್‌ಬಿಐ ಜೊತೆ ವಿಲೀನವಾಯಿತು. ಕಾರ್ಪೊರೇಷನ್ ಬ್ಯಾಂಕ್ ಇಂಡಿಯನ್ ಬ್ಯಾಂಕ್‌ನ ಜೊತೆಗೆ ಇಲ್ಲವಾಯಿತು. ಈ ಮೊದಲೇ ಉತ್ತರ ಭಾರತದ ಹಿಂದಿ ಭಾಷಿಗರಿಂದ ತುಂಬಿ ತುಳುಕುತ್ತಿದ್ದ ಬ್ಯಾಂಕ್‌ಗಳು ಇದೀಗ ಉತ್ತರ ಭಾರತೀಯರ ಬ್ಯಾಂಕ್ ಆಗಿ ನಮ್ಮ ಮುಂದೆ ನಿಂತಿದೆ. ಮುಂದೊಂದು ದಿನ ದಕ್ಷಿಣ ಭಾರತದ ಭಾಷೆ, ಸಂಸ್ಕೃತಿ ಎಲ್ಲವೂ ಉತ್ತರ ಭಾರತದಲ್ಲಿ ವಿಲೀನವಾಗುವುದಕ್ಕೆ ಪೀಠಿಕೆಯಿದು. ಬ್ಯಾಂಕ್ ವಿಲೀನಗಳ ಕುರಿತಂತೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ‘ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಸ್ಥಾನ’ ಕಲ್ಪಿಸುವ ಭರವಸೆಯನ್ನು ನೀಡಿದರು. ಬಿಜೆಪಿಯೂ ಸೇರಿದಂತೆ ಎಲ್ಲ ಪಕ್ಷಗಳು ಭಾರೀ ಸಂಭ್ರಮದಿಂದ ವಿತ್ತ ಸಚಿವೆಯ ಹೇಳಿಕೆಯನ್ನು ಸ್ವಾಗತಿಸಿದವು. ಆದರೆ ಇದು ಕನ್ನಡಿಗರ ಮೂಗಿಗೆ ತಾಗಿಸಿದ ಬೆಣ್ಣೆ ಎನ್ನುವುದು ಅರಿವಾಗುವಾಗ ತಡವಾಗಿತ್ತು. ರಾಜ್ಯದಲ್ಲಿ 953 ಹುದ್ದೆ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟು 12, 071 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಇತ್ತೀಚೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಇಲ್ಲಿ ಪರೀಕ್ಷೆ ಬರೆಯಲು ಕನ್ನಡ ಭಾಷೆಗೆ ಅವಕಾಶವೇ ಇರಲಿಲ್ಲ. ಹಾಗಾದರೆ, ವಿತ್ತ ಸಚಿವೆ ಕನ್ನಡಿಗರಿಗೆ ನೀಡಿದ ಭರವಸೆ, ಕೇಂದ್ರ ಸರಕಾರ ಈ ಹಿಂದೆ ತೆಗೆದುಕೊಂಡ ನಿರ್ಧಾರಕ್ಕೆ ಏನು ಅರ್ಥ ಉಳಿಯಿತು? ಕನ್ನಡಿಗರನ್ನು ಬ್ಯಾಂಕಿಂಗ್ ಕ್ಷೇತ್ರದಿಂದ ದೂರ ಉಳಿಸುವುದರ ಜೊತೆ ಜೊತೆಗೆ, ಕೆಲಸ ಬೇಕಾದಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯಿರಿ ಎಂಬ ಪರೋಕ್ಷ ಹಿಂದಿ ಹೇರಿಕೆಯ ದುರುದ್ದೇಶವನ್ನೂ ಇದು ಹೊಂದಿೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದೀಗ ಗೃಹ ಸಚಿವ ಅಮಿತ್ ಶಾ ಅವರು ಪ್ರಾದೇಶಿಕ ಭಾಷೆಗಳ ವಿರುದ್ಧ ಬಹಿರಂಗವಾಗಿಯೇ ‘ಯುದ್ಧ’ ಘೋಷಿಸಿದ್ದಾರೆ. ‘‘ಭಾರತವನ್ನು ಒಂದು ದೇಶವನ್ನಾಗಿಸಲು ಒಂದು ಭಾಷೆಯ ಅಗತ್ಯವಿದೆ. ಇಂದಿನ ದಿನಗಳಲ್ಲಿ ದೇಶವನ್ನು ಒಗ್ಗೂಡಿಸಬಲ್ಲ ಏಕೈಕ ಭಾಷೆಯೆಂದರೆ ಅದು ಅತ್ಯಂತ ಹೆಚ್ಚು ಮಾತನಾಡುವ ಹಿಂದಿ ಭಾಷೆಯಾಗಿದೆ’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲ, 2024ರ ಹೊತ್ತಿಗೆ ಹಿಂದಿಗೆ ಚಿರಸ್ಥಾಯಿ ಸ್ಥಾನ ಕಲ್ಪಿಸಲಾಗುತ್ತದೆ, ಈಗ ಅರ್ಧ ಯುದ್ಧವನ್ನಷ್ಟೇ ಗೆಲ್ಲಲಾಗಿದೆ ಎಂದೂ ತಿಳಿಸಿದ್ದಾರೆ. ಅಮಿತ್ ಶಾ ಮೇಲಿನ ಮಾತುಗಳು ಹಲವು ಪ್ರಶ್ನೆಗಳನ್ನು ಎತ್ತಿದೆ. ಮುಖ್ಯವಾಗಿ ಅವರು ಹೇಳಿರುವುದು, ‘ಒಂದು ದೇಶವನ್ನಾಗಿಸಲು ಒಂದು ಭಾಷೆಯ ಅಗತ್ಯವಿದೆ’ ಎನ್ನುವುದು. ಹಾಗಾದರೆ, ಭಾರತ ಇನ್ನೂ ಒಂದು ದೇಶವಾಗಿಲ್ಲ ಎಂದು ಅವರ ಮಾತಿನ ಅರ್ಥವೆ? ಹಿಂದಿಯೇತರ ಭಾಷೆಯನ್ನಾಡುವವರು ಇನ್ನೂಉ ಭಾರತದೊಂದಿಗೆ ಸೇರಿಕೊಂಡಿಲ್ಲ ಎನ್ನುವುದನ್ನು ಅವರ ಮಾತುಗಳು ನೇರವಾಗಿ ಧ್ವನಿಸುತ್ತದೆ. ಇಂತಹ ಮಾತುಗಳನ್ನು ಈ ಹಿಂದೆಯೂ ಬಿಜೆಪಿಯ ನಾಯಕರು ಆಡಿರುವುದನ್ನು ನಾವು ಸ್ಮರಿಸಬಹುದಾಗಿದೆ. ದಕ್ಷಿಣ ಭಾರತೀಯರ ಬಣ್ಣವನ್ನು ಮುಂದಿಟ್ಟುಕೊಂಡು ‘‘ನಾವು ಅವರನ್ನು ಭಾರತೀಯರೆಂದೇ ಪರಿಗಣಿಸುತ್ತೇವೆ’’ ಎಂಬಂತಹ ಹೇಳಿಕೆಯನ್ನು ಬಿಜೆಪಿ ಸಂಸದನೊಬ್ಬ ನೀಡಿದ್ದ. ಆಳದಲ್ಲಿ ದಕ್ಷಿಣ ಭಾರತೀಯರ ಕುರಿತಂತೆ ಉತ್ತರ ಭಾರತೀಯರಿಗಿರುವ ‘ಅನ್ಯತೆ’ಯನ್ನು ಇದು ಎತ್ತಿ ತೋರಿಸುತ್ತದೆ. ಭಾಷೆ ಇಲ್ಲಿ ನೆಪ ಮಾತ್ರ. ಭಾಷೆಯನ್ನು ಮುಂದಿಟ್ಟುಕೊಂಡು ದಕ್ಷಿಣ ಭಾರತೀಯರ ದ್ರಾವಿಡ ಅಸ್ಮಿತೆಯನ್ನು ನಾಶ ಮಾಡುವುದೇ ಅವರ ದುರುದ್ದೇಶವಾಗಿದೆ. ಹಿಂದಿಯ ಹೇರಿಕೆ ದೇಶವನ್ನು ಭಾಷೆಯ ಹೆಸರಲ್ಲಿ ವಿಭಜಿಸಬಲ್ಲುದೇ ಹೊರತು, ಶಾ ಹೇಳಿದಂತೆ ಒಗ್ಗೂಡಿಸಲಾರದು.

‘ಕಾನೂನು, ವಿಜ್ಞಾನ, ತಂತ್ರಜ್ಞಾನದಲ್ಲಿ ಹಿಂದಿಯನ್ನು ಬಳಸಬೇಕಾಗಿದೆ’ ಎನ್ನುವ ಅಮಿತ್, ಎಲ್ಲರೂ ಹಿಂದಿ ಮಾತನಾಡುವ ಮೂಲಕ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ದೇಶಕ್ಕೆ ಹೇಳುತ್ತಿದ್ದಾರೆ. ಇತ್ತೀಚಿನ ವರದಿಯೊಂದರ ಪ್ರಕಾರ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ದಕ್ಷಿಣ ಭಾರತೀಯ ರಾಜ್ಯಗಳೇ ಅಗ್ರ ಸ್ಥಾನಗಳಲ್ಲಿವೆ. ಐಟಿ, ಬಿಟಿ ಕ್ಷೇತ್ರಗಳಲ್ಲಿ ಕರ್ನಾಟಕ, ಆಂಧ್ರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಗಳನ್ನು ಪಡೆದಿವೆ. ಅಭಿವೃದ್ಧಿ, ಪೌಷ್ಟಿಕತೆಯಲ್ಲಿ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಎಷ್ಟೋ ವಾಸಿ. ಹಿಂದಿ ಭಾಷೆ ಕಲಿಯುವುದರಿಂದ ಅಭಿವೃದ್ಧಿ ಸಾಧ್ಯ ಎಂದಾದರೆ, ಉತ್ತರ ಭಾರತ ಯಾಕೆ ದಕ್ಷಿಣ ಭಾರತಕ್ಕಿಂತ ಹಿಂದುಳಿದಿದೆ? ಎಲ್ಲ ಕ್ಷೇತ್ರಗಳಲ್ಲೂ ಹಿಂದಿ ತಿಳಿಯದ ದಕ್ಷಿಣ ಭಾರತದ ವಿವಿಧ ರಾಜ್ಯಗಳೇ ಯಾಕೆ ಮುಂದಿವೆ? ಈ ಪ್ರಶ್ನೆಗೆ ವೊದಲು ಅಮಿತ್ ಶಾ ಉತ್ತರಿಸಬೇಕಾಗಿದೆ.

ಹಿಂದಿ ಭಾಷೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ‘ಅರ್ಧ ಯುದ್ಧ ಮಾತ್ರ ಗೆದ್ದಿದ್ದೇವೆ’ ಎಂದು ಅಮಿತ್ ಶಾ ಹೇಳಿದ್ದಾರೆ. ಯುದ್ಧ ನಡೆಯಬೇಕಾದರೆ ಒಬ್ಬ ಎದುರಾಳಿ ಇರಲೇಬೇಕು. ಹಾಗಾದರೆ, ಅಮಿತ್ ಯಾರ ವಿರುದ್ಧ ತನ್ನ ಅರ್ಧ ಯುದ್ಧವನ್ನು ಗೆದ್ದಿದ್ದಾರೆ ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಅವರು ಅರ್ಧ ಗೆದ್ದಿರುವುದು ಕನ್ನಡ ಭಾಷೆಯ ಮೇಲೆ ಹೇರಿದ ಯುದ್ಧವನ್ನು. ಕನ್ನಡತನವೆನ್ನುವುದು ಆಡುವ ಭಾಷೆಗಷ್ಟೇ ಸೀಮಿತವಾಗಿಲ್ಲ. ಈ ನೆಲದ ಪರಂಪರೆ, ಸೌಹಾರ್ದ ವೌಲ್ಯಗಳು, ಆಚರಣೆ, ಸಂಸ್ಕೃತಿ, ಬಟ್ಟೆ ಬರೆ, ಬದುಕುವ ಕ್ರಮ ಎಲ್ಲವೂ ಕನ್ನಡತನದೊಂದಿಗೆ ಬೆರೆತಿವೆ. ಹಿಂದಿ ಹೇರಿಕೆಯ ಮೂಲಕ ಅವೆಲ್ಲವನ್ನೂ ನಾಶ ಪಡಿಸಿ ಉತ್ತರ ಭಾರತೀಯತೆಯನ್ನು ನಮ್ಮ ಮೇಲೆ ಹೇರಲು ಹೊರಟಿದ್ದಾರೆ. ಈಗಾಗಲೇ ಆ ಯುದ್ಧದಲ್ಲಿ ಅವರು ಅರ್ಧ ಗೆದ್ದಿದ್ದಾರೆ. ಹಿಂದೊಮ್ಮೆ ಇದೇ ಅಮಿತ್ ಶಾ ಅವರು ಕೇರಳಿಗರ ‘ಓಣಂ ಹಬ್ಬ’ಕ್ಕೆ ‘ವಾಮನ ಜಯಂತಿಯ ಶುಭಾಶಯಗಳು’ ಎಂಬ ಜಾಹೀರಾತು ನೀಡಿ, ಕೇರಳಿಗರಿಂದ ತೀವ್ರ ಟೀಕೆಗೊಳಗಾಗಿದ್ದರು. ಓಣಂ ಹಬ್ಬ, ವಾಮನ ಎನ್ನುವ ವೈದಿಕನಿಂದ ವಂಚನೆಗೊಳಗಾಗಿ ಸಾಮ್ರಾಜ್ಯ ಕಳೆದುಕೊಂಡ ‘ಬಲಿ ಚಕ್ರವರ್ತಿ’ಯನ್ನು ಸ್ಮರಿಸುವ ದಿನ. ‘ಓಣಂ ಹಬ್ಬ’ದಂದು ಆತ ತನ್ನ ಜನರ ಯೋಗಕ್ಷೇಮ ವೀಕ್ಷಿಸಲು ಮರಳಿ ತನ್ನ ರಾಜ್ಯಕ್ಕೆ ಬರುತ್ತಾನೆ ಎನ್ನುವ ನಂಬಿಕೆ. ಆ ಕಾರಣಕ್ಕಾಗಿ ಜನರಲ್ಲಿ ಅಂದು ಸಂಭ್ರಮ. ಆದರೆ ಅಮಿತ್ ಶಾ ಆ ದಿನವನ್ನು, ಬಲಿ ಚಕ್ರವರ್ತಿಗೆ ವಂಚಿಸಿದ ‘ವಾಮನನ ಹುಟ್ಟು ದಿನ’ವಾಗಿ ಸಂಭ್ರಮಿಸಲು ಹೊರಟು, ಕೇರಳಿಗರ ಪ್ರತಿಭಟನೆಯನ್ನು ಎದುರಿಸಿದರು. ಒಂದು ಭಾಷೆಯ ಜೊತೆಜೊತೆಗೇ ನಮ್ಮದಲ್ಲದ ಸಂಸ್ಕೃತಿಯನ್ನೂ ನಮ್ಮ ಮೇಲೆ ಹೇಗೆ ಹೇರಲಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಹೌದು, ಅಮಿತ್ ಶಾ ಹೇಳಿದಂತೆ, ನಮ್ಮ ಕನ್ನಡದ ವಿರುದ್ಧ ಅವರು ಅರ್ಧ ಯುದ್ಧವನ್ನು ಗೆದ್ದಿದ್ದಾರೆ. ಆದರೆ ಅರ್ಧ ಯುದ್ಧ ಇನ್ನೂ ಬಾಕಿ ಉಳಿದಿದೆ. ಆ ಯುದ್ಧದಲ್ಲಿ ನಮ್ಮ ಕನ್ನಡತನ ಯಾವ ಕಾರಣಕ್ಕೂ ಸೋಲಬಾರದು. ಹಿಂದಿಯ ವೇಷದಲ್ಲಿ ಮತ್ತೆ ದಕ್ಷಿಣ ಭಾರತದ ನೆತ್ತಿಯ ಮೇಲೆ ಪಾದ ಊರ ಹೊರಟ ವಾಮನನ್ನು ಸೋಲಿಸುವ ಮೂಲಕ ನಾವು ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News