ಈ ರಾಜ್ಯದಲ್ಲೂ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಇಲ್ಲ

Update: 2019-09-16 03:42 GMT

ಹೈದರಾಬಾದ್, ಸೆ.16: ರಾಜ್ಯದಲ್ಲಿ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ-2019ರ ಅನುಷ್ಠಾನ ಇಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ ಬೆನ್ನಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಕೂಡಾ ದೀದಿ ಹಾದಿ ತುಳಿದಿದ್ದಾರೆ. ಸಂಚಾರ ಅಪರಾಧಗಳಿಗೆ ವಿಧಿಸುವ ದಂಡವನ್ನು ಹಲವು ಪಟ್ಟು ಹೆಚ್ಚಿಸುವ ಹೊಸ ಕಾಯ್ದೆಯನ್ನು ತೆಲಂಗಾಣ ಜಾರಿಗೊಳಿಸುವುದಿಲ್ಲ ಎಂದು ಕೆಸಿಆರ್ ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದರು. ಇತರ ಹಲವು ರಾಜ್ಯಗಳು ಹೊಸ ಕಾಯ್ದೆಯ ಅನ್ವಯ ದಂಡವನ್ನು ಇಳಿಸಿವೆ.

"ಭಾರಿ ದಂಡದೊಂದಿಗೆ ನಾಗರಿಕರಿಗೆ ಕಿರುಕುಳ ನೀಡುವ ಉದ್ದೇಶ ನಮಗೆ ಇಲ್ಲ" ಎಂದು ಕೆಸಿಆರ್ ಸ್ಪಷ್ಟಪಡಿಸಿದರು.

"ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಮೋಟಾರು ವಾಹನ ಕಾಯ್ದೆಯನ್ನು ನಾವು ಅನುಷ್ಠಾನಗೊಳಿಸುವುದಿಲ್ಲ. ನಾವು ನಮ್ಮದೇ ಕಾನೂನು ತರುತ್ತೇವೆ. ಹೊಸ ವಾಹನ ಸಂಚಾರ ನಿಮಯಾವಳಿಗಳನ್ನು ಜಾರಿಗೊಳಿಸಲು ನಮಗೆ ಆತುರ ಇಲ್ಲ. ದೊಡ್ಡ ಪ್ರಮಾಣದ ದಂಡದೊಂದಿಗೆ ಜನರಿಗೆ ಕಿರುಕುಳ ನೀಡುವ ಉದ್ದೇಶ ಇಲ್ಲ" ಎಂದು ವಿಧಾನಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಪುವ್ವಾಡ ಅಜಯ್ ಕುಮಾರ್, "ಹೊಸ ಮೋಟಾರು ವಾಹನ ಕಾಯ್ದೆಯ ದಂಡನಾ ಅಂಶಗಳು ಕೇಂದ್ರ ಸರ್ಕಾರದ ಇಮೇಜ್‌ಗೆ ಸ್ವಲ್ಪಮಟ್ಟಿಗೆ ಧಕ್ಕೆ ತಂದಿವೆ. ನಾವು ಕೂಡಾ ಅಂಥದ್ದೇ ಅಪಾಯ ಮೈಮೇಲೆ ಎಳೆದುಕೊಳ್ಳಬಾರದು ಎನ್ನುವುದು ಕೆಸಿಆರ್ ಅವರ ಅಭಿಪ್ರಾಯ" ಎಂದು ಹೇಳಿದರು.

ಆದರೆ ತೆಲಂಗಾಣ ತನ್ನದೇ ಹೊಸ ಕಾಯ್ದೆ ರೂಪಿಸುವುದಿಲ್ಲ. ಅಗತ್ಯ ಬದಲಾವಣೆ ಮಾಡಿಕೊಳ್ಳುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News