​52 ವರ್ಷ ಕಳೆದರೂ ಕನಸಾಗಿಯೇ ಉಳಿದ ರಕ್ಷಣಾ ವಿವಿ

Update: 2019-09-16 03:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.16: ಈ ಪ್ರಸ್ತಾವ ಚಾಲನೆಗೆ ಬಂದು ಬರೋಬ್ಬರಿ 52 ವರ್ಷಗಳೇ ಕಳೆದಿವೆ. ಅಡಿಗಲ್ಲು ಹಾಕಿ ಆರು ವರ್ಷಗಳಾಗಿವೆ. ಆದರೆ ರಾಜಕೀಯ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದಿಂದಾಗಿ ಈ ಮಹತ್ವಾಕಾಂಕ್ಷಿ ಭಾರತದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾನಿಲಯ (ಐಎನ್‌ಡಿಯು) ಸ್ಥಾಪನೆ ವಿಚಾರದಲ್ಲಿ ಕಾರ್ಯ ಮಾತ್ರ ಒಂದಿಂಚೂ ಮುಂದೆ ಸಾಗಿಲ್ಲ.

ಸುದೀರ್ಘ ಅಂತರ ಸಚಿವಾಲಯ ಸಲಹೆ ಬಳಿಕ ಐಎನ್‌ಡಿಯು (ಇಂಡು) ಕರಡು ಮಸೂದೆಯನ್ನು ಪ್ರಧಾನಿ ಕಚೇರಿ ಮತ್ತು ಸಂಪುಟ ಸಚಿವಾಲಯಕ್ಕೆ 2017ರ ಡಿಸೆಂಬರ್‌ನಲ್ಲೇ ಸಲ್ಲಿಸಿದ್ದರೂ ಯಾವುದೇ ಪ್ರಗತಿ ಇಲ್ಲ ಎಂದು ಉನ್ನತ ಮೂಲಗಳು ಹೇಳಿವೆ. ಕ್ರಮೇಣ ಐಎನ್‌ಡಿಯು ಸ್ಥಾಪಿಸಬೇಕಾದರೆ ಈ ಮಸೂದೆಗೆ ಕೇಂದ್ರ ಸಂಪುಟ ಮತ್ತು ಸಂಸತ್ತು ಅನುಮೋದನೆ ನೀಡಬೇಕಾಗಿದೆ.

ದೇಶದ ಭದ್ರತಾ ಮುಖಂಡರನ್ನು ರೂಪಿಸುವ ಸಲುವಾಗಿ ಅಮೆರಿಕದಿಂದ ಹಿಡಿದು ಚೀನಾವರೆಗೆ ಬಹುತೇಕ ರಾಷ್ಟ್ರಗಳಲ್ಲಿ ರಾಷ್ಟ್ರೀಯ ರಕ್ಷಣಾ ವಿವಿಗಳಿವೆ. ಇವು ಸಾಮಾನ್ಯವಾಗಿ ದೀರ್ಘಾವಧಿ ಕಾರ್ಯತಂತ್ರ ಅಧ್ಯಯನ ಮತ್ತು ಅಪಾಯ ಸಾಧ್ಯತೆಗಳ ಮೌಲ್ಯಮಾಪನ ಮಾಡುತ್ತವೆ. ಭಾರತಕ್ಕೆ ಕೂಡಾ ಖಂಡಿತವಾಗಿಯೂ ಆಡಳಿತ ರಂಗ ಮತ್ತು ಶಿಕ್ಷಣ ರಂಗದ ನಡುವೆ ಸಂಬಂಧ ಕಲ್ಪಿಸುವ, ಆಡಳಿತದಲ್ಲಿ ತಂತ್ರಗಾರಿಕೆ ಸಂಸ್ಕೃತಿಯನ್ನು ರೂಪಿಸುವ ವಿವಿಯ ಅಗತ್ಯ ಮತ್ತು ಅನಿವಾರ್ಯ ಇದ್ದೇ ಇದೆ.

"ರಕ್ಷಣಾ ವಿಚಾರವಾಗಿ ಮಾತನಾಡಿದರೆ ಚೀನಾ ನಮಗಿಂತ ಕನಿಷ್ಠ 50 ವರ್ಷ ಮುಂದಿದೆ. ನಾವು ಚುನಾವಣೆ ಮೇಲೆ ಚುನಾವಣೆಗೆ ಮುಗ್ಗರಿಸುತ್ತಲೇ ಇದ್ದೇವೆ. ಸಿಡಿಎಸ್ (ರಕ್ಷಣಾ ಸಿಬ್ಬಂದಿ ಮುಖ್ಯಸ್ಥ) ಹುದ್ದೆಗೆ ಅನುಮೋದನೆ ನೀಡಿದ ಬಳಿಕ ಇದೀಗ ಸರ್ಕಾರ ರಕ್ಷಣಾ ವಿವಿಗೆ ಒತ್ತು ನೀಡಬೇಕಾಗಿದೆ. ರಕ್ಷಣೆಗೆ ಸಂಬಂಧಿಸಿದಂತೆ ದೀರ್ಘಾವಧಿ, ಸಮಗ್ರ, ಬಹುಮುಖಿ ಕಾರ್ಯತಂತ್ರ ರೂಪಿಸುವಲ್ಲಿ ಭಾರತ ಹಿಂದಿದೆ" ಎಂದು ಉನ್ನತ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹರ್ಯಾಣಾದ ಗುರುಗಾಂವ್ ಸಮೀಪದ ಬಿನೋಲಾದಲ್ಲಿ 2013ರ ಮೇ ತಿಂಗಳಲ್ಲಿ ರಕ್ಷಣಾ ವಿವಿಗೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಶಿಲಾನ್ಯಾಸ ಮಾಡಿದ್ದರು. ಅರಂಭಿಕವಾಗಿ 202 ಎಕರೆ ಪ್ರದೇಶದಲ್ಲಿ 395 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಉದ್ದೇಶವಿತ್ತು. ಆದರೆ ಇದೀಗ ಅಂದಾಜು ವೆಚ್ಚ 2,000 ಕೋಟಿ ದಾಟಿದೆ" ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News