ಮಾಜಿ ವಿಧಾನಸಭಾ ಸ್ಪೀಕರ್ ಕೊಡೆಲಾ ಶಿವ ಪ್ರಸಾದ್ ಆತ್ಮಹತ್ಯೆ

Update: 2019-09-16 16:48 GMT

ಹೈದರಾಬಾದ್, ಸೆ.16: ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಆಂಧ್ರಪ್ರದೇಶದ ಮಾಜಿ ಸ್ಪೀಕರ್ ಕೊಡೇಲ ಶಿವಪ್ರಸಾದ ರಾವ್ ಸೋಮವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ತೆಲುದು ದೇಶಂ ಪಕ್ಷದ ಮುಖಂಡರಾಗಿರುವ ರಾವ್ ರವಿವಾರ ರಾತ್ರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ವರದಿಯಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ಅವರ ಕುತ್ತಿಗೆಯಲ್ಲಿ ಗಾಯದ ಗುರುತಿದೆ. ಮರಣೋತ್ತರ ಪರೀಕ್ಷೆಯಿಂದ ಸತ್ಯಾಂಶ ಹೊರಬೀಳಲಿದೆ ಎಂದು ತೆಲುಗುದೇಶಂ ಪಕ್ಷದ ತೆಲಂಗಾಣ ಘಟಕಾಧ್ಯಕ್ಷ ಎಲ್ ರಾಮಣ್ಣ ಹೇಳಿದ್ದಾರೆ.

 ರಾವ್ ಆತ್ಮಹತ್ಯೆಗೆ ಮುಂದಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರ ವಾಸ್ತವ ವಿಷಯ ಬಹಿರಂಗಗೊಳಿಸುತ್ತೇವೆ ಎಂದು ಬಂಜಾರಾ ಹಿಲ್ಸ್ ಎಸಿಪಿ ಕೆ ಶ್ರೀನಿವಾಸ ರಾವ್ ಹೇಳಿದ್ದಾರೆ.

  ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ಈ ಹಿಂದಿನ ಸರಕಾರದಲ್ಲಿ ಶಿವಪ್ರಸಾದ ರಾವ್ ಸ್ಪೀಕರ್ ಆಗಿದ್ದರು. ಹೈದರಾಬಾದ್‌ನಲ್ಲಿರುವ ಆಂಧ್ರಪ್ರದೇಶದ ಹಳೆಯ ವಿಧಾನಸಭಾ ಕಟ್ಟಡದಿಂದ ಬೆಲೆಬಾಳುವ ಪೀಠೋಪಕರಣಗಳನ್ನು ಶಿವಪ್ರಸಾದ್ ರಾವ್ ಗುಂಟೂರು ಜಿಲ್ಲೆಯ ಸಟ್ಟೇನಪಳ್ಳಿಯಲ್ಲಿರುವ ತಮ್ಮ ಮನೆಗೆ ಸಾಗಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ವಿಚಾರಣೆಯ ವೇಳೆ ರಾವ್ ತಪ್ಪೊಪ್ಪಿಕೊಂಡಿದ್ದರು.

  ಕೆಲ ತಿಂಗಳ ಹಿಂದೆ ರಾವ್, ಅವರ ಪುತ್ರ ಹಾಗೂ ಪುತ್ರಿಯ ವಿರುದ್ಧ ವಂಚನೆ, ಬೆದರಿಕೆ ಒಡ್ಡಿರುವುದು ಹಾಗೂ ಸುಲಿಗೆ ಆರೋಪದಲ್ಲಿ ಸಟ್ಟೇನಪಳ್ಳಿ ಮತ್ತು ನರಸರಾವ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾವ್ ಹಾಗೂ ಅವರ ಕುಟುಂಬದವರು ಸ್ಥಳೀಯ ಮಾಫಿಯಾದಂತೆ ವರ್ತಿಸಿ ಸ್ಥಳೀಯರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಈಗ ಆಂಧ್ರಪ್ರದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News