ಗುಲಾಂ ನಬಿ ಆಝಾದ್‌ಗೆ ಜಮ್ಮು-ಕಾಶ್ಮೀರಕ್ಕೆ ತೆರಳಲು ಸುಪ್ರಿಂಕೋರ್ಟ್ ಅನುಮತಿ

Update: 2019-09-16 09:29 GMT

 ಹೊಸದಿಲ್ಲಿ, ಸೆ.16: ಕಣವೆ ರಾಜ್ಯದ ಜನರ ಯೋಗಕ್ಷೇಮವನ್ನು ವಿಚಾರಿಸಲು ಶ್ರೀನಗರ, ಅನಂತ್‌ನಾಗ್, ಬಾರಮುಲ್ಲಾ ಹಾಗೂ ಜಮ್ಮು ಜಿಲ್ಲೆಗಳಿಗೆ ಭೇಟಿ ನೀಡಲು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್‌ಗೆ ಸುಪ್ರೀಂಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಯಾವುದೇ ರಾಜಕೀಯ ರ್ಯಾಲಿ ಅಥವಾ ಕಾರ್ಯಕ್ರಮವನ್ನು ಆಯೋಜಿಸಲು ತಾನು ತವರು ರಾಜ್ಯಕ್ಕೆ ತೆರಳುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್ ನಾಯಕ ಭರವಸೆ ನೀಡಿದ್ದಾರೆ.
ಜಮ್ಮು-ಕಾಶ್ಮೀರದ ಭೇಟಿಯ ವೇಳೆ ಕಾಂಗ್ರೆಸ್ ನಾಯಕ ಆಝಾದ್ ಜನರೊಂದಿಗೆ ಮುಕ್ತವಾಗಿ ಬೆರೆಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.
ಆಝಾದ್ ಕಾಶ್ಮೀರ ಜನರನ್ನು ಭೇಟಿಯಾಗಿ, ಅವರ ಯೋಗಕ್ಷೇಮವನ್ನು ವಿಚಾರಿಸಲು ಬಯಸಿದ್ದಾರೆ ಎಂದು ಆಝಾದ್ ಪರ ಹಿರಿಯ ವಕೀಲ ಎಎಂ ಸಿಂಘ್ವಿ ಅವರು ಜಸ್ಟಿಸ್‌ಗಳಾದ ಎಸ್‌ಎ ಬೊಬ್ಡೆ ಹಾಗೂ ಎಸ್ ಅಬ್ದುಲ್ ನಝೀರ್ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
ಸಾಮಾನ್ಯ ಜನರನ್ನು ತಲುಪುವ ನನ್ನ ಕಾಶ್ಮೀರದ ಪ್ರವಾಸ ಮಾನವೀಯತೆಯಿಂದ ಕೂಡಿರಲಿದೆ. ಕಾಶ್ಮೀರದಿಂದ ವಾಪಸಾದ ಬಳಿಕ ಸುಪ್ರೀಂಕೋರ್ಟ್‌ಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸುವೆ. ರಾಜ್ಯ ಹಾಗೂ ಕೇಂದ್ರ ಸರಕಾರ ಕಾಶ್ಮೀರ ಜನರ ಬಗ್ಗೆ ಚಿಂತಿಸುತ್ತಿಲ್ಲ. ಜಮ್ಮು-ಕಾಶ್ಮೀರದಲ್ಲಿ ಸಂಪರ್ಕ ಸಾಧನ ಹಳಿ ತಪ್ಪಿರುವುದಕ್ಕೆ ಆಂತಕ ಉಂಟಾಗಿದೆ. ಸಾಮಾನ್ಯ ಜನರು ಹೇಗೆ ಜೀವನ ಸಾಗಿಸುತ್ತಾರೆಂಬ ಚಿಂತೆ ನನ್ನನ್ನು ಹೆಚ್ಚು ಕಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಆಝಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News