ಆರ್ಥಿಕ ಹಿಂಜರಿತಕ್ಕೆ ಸುಪ್ರೀಂ ಕೋರ್ಟ್ ಕಾರಣ!

Update: 2019-09-16 10:53 GMT

ಹೊಸದಿಲ್ಲಿ, ಸೆ.16: ಭಾರತದ ಆರ್ಥಿಕ ಹಿಂಜರಿತಕ್ಕೆ ಹಿರಿಯ ವಕೀಲ ಹರೀಶ್ ಸಾಳ್ವೆ ಸುಪ್ರೀಂ ಕೋರ್ಟನ್ನು ದೂರಿದ್ದಾರೆ. ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರ ಕಾನೂನು ಸುದ್ದಿ ವೆಬ್ ತಾಣ theleaflet.inಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾಳ್ವೆ, ದೇಶದ ಆರ್ಥಿಕ ಕುಸಿತ 2012ರಲ್ಲಿ 2 ಜಿ ಸ್ಪೆಕ್ಟ್ರಂ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಆರಂಭಗೊಂಡಿತ್ತು. ಒಂದೇ ಹೊಡೆತ್ಕೆ ಸುಪ್ರೀಂ ಕೋರ್ಟ್ ಟೆಲಿಕಾಂ ಆಪರೇಟರ್‍ಗಳಿಗೆ ನೀಡಲಾಗಿದ್ದ 122 ಸ್ಪೆಕ್ಟ್ರಂ ಪರವಾನಗಿಗಳನ್ನು ರದ್ದುಗೊಳಿಸಿ ಸಮಸ್ಯೆಗೆ ಕಾರಣವಾಯಿತು. “ನಾನು ಸಂಪೂರ್ಣವಾಗಿ ಸುಪ್ರೀಂ ಕೋರ್ಟನ್ನು ದೂರುತ್ತೇನೆ” ಎಂದು ಸಾಳ್ವೆ ಹೇಳಿದರು.

“2ಜಿಯಲ್ಲಿ ಪರವಾನಿಗೆಗಳನ್ನು ತಪ್ಪಾಗಿ ವಿತರಿಸಲಾಗಿತ್ತು ಎಂದು ಜನರನ್ನು ಜವಾಬ್ದಾರರನ್ನಾಗಿಸಲಾಗಿದೆ ಎಂಬುದು ಅರ್ಥವಾಗುತ್ತದೆ. ಆದರೆ ವಿದೇಶಿಯರೂ ಹೂಡಿಕೆ ಮಾಡಿರುವಾಗಲೂ ಸಾರಾಸಗಟಾಗಿ ಎಲ್ಲಾ ಪರವಾನಗಿಗಳನ್ನು ರದ್ದು ಪಡಿಸಲಾಗಿದೆ. ವಿದೇಶಿ ಹೂಡಿಕೆದಾರರು ಹೂಡಿಕೆ ಮಾಡಿದಾಗ ಅವರ ಭಾರತೀಯ ಪಾಲುದಾರರು ಹೇಗೆ ಪರವಾನಗಿ ಪಡೆದರೆಂದು ಅವರಿಗೆ ತಿಳಿದಿರುವುದಿಲ್ಲ. ಅವರು ಬಿಲಿಯನ್‍ ಗಟ್ಟಲೆ ಡಾಲರ್ ಹೂಡಿಕೆ ಮಾಡಿದ್ದರು, ಆದರೆ ಅದೆಲ್ಲವನ್ನೂ ಸುಪ್ರೀಂ ಕೋರ್ಟ್ ಒಂದೇ ಏಟಿಗೆ ಹೊಡೆದುರುಳಿಸಿದೆ. ಆಗಲೇ ಆರ್ಥಿಕ ಅವನಗತಿ ಆರಂಭಗೊಂಡಿತ್ತು'' ಎಂದು ಸಾಳ್ವೆ ಹೇಳಿದರು.

ಕೆಲ ವಾಣಿಜ್ಯ ಸಂಬಂಧಿ ಪ್ರಕರಣಗಳನ್ನು ನಿಭಾಯಿಸುವಲ್ಲಿಯೂ ಸುಪ್ರೀಂ ಕೋರ್ಟ್ ಸ್ಥಿರತೆ ಕಾಪಾಡಿಕೊಂಡಿರದೇ ಇರುವುದು ಹೂಡಿಕೆದಾರರ ಮನದಲ್ಲಿ ಕಳವಳಕ್ಕೆ ಕಾರಣವಾಗಿದೆ ಎಂದು ಸಾಳ್ವೆ ಹೇಳಿದ್ದಾರೆ.

“ಕಲ್ಲಿದ್ದಲು ಗಣಿಗಳ ಪರವಾನಿಗೆಯನ್ನು ಸಾರಾಸಗಟಾಗಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದರಿಂದಾಗಿ ಈ ರಂಗದಲ್ಲಿ ವಿದೇಶಿ ಬಂಡವಾಳವೂ ಬಾಧಿತವಾಗಿ ಇಂಡೊನೇಷ್ಯ ಹಾಗೂ  ಇತರ ದೇಶಗಳ ಕಲ್ಲಿದ್ದಲು ಬೆಲೆ ಕಡಿಮೆಯಾಗಿ ಆಮದುಗೊಳಿಸುವುದು  ಅಗ್ಗವಾಯಿತು'' ಎಂದು ಸಾಳ್ವೆ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News