ಶೃಂಗೇರಿಗೆ ಬಿಡುಗಡೆಯಾಗಿದ್ದ 15 ಕೋಟಿ ರೂ. ಅನುದಾನಕ್ಕೆ ಬಿಜೆಪಿ ಸರಕಾರ ತಡೆ: ಶಾಸಕ ರಾಜೇಗೌಡ ಆರೋಪ

Update: 2019-09-16 12:42 GMT

ಶೃಂಗೇರಿ, ಸೆ.16: ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಕಾರಗದ್ದೆ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಚೆನ್ನಪ್ಪಗೌಡ ಅವರ ಜಮೀನು ಇತ್ತೀಚೆಗೆ ಸುರಿದ ಭಾರೀ ಮಳೆಯಲ್ಲಿ ಕೊಚ್ಚಿ ಹೋಗಿದ್ದು, ಅವರು ಅಪಾರ ನಷ್ಟ ಅನುಭವಿಸಿದ್ದರು. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಪ್ರವಾಹ ಹಾನಿ ಸಮೀಕ್ಷೆಗೆ ಬಂದಿದ್ದರೂ ಅತಿವೃಷ್ಟಿ ಸಂತ್ರಸ್ತರಿಗೆ ಯಾವುದೇ ನೆರವನ್ನು ಇದುವರೆಗೂ ನೀಡಿಲ್ಲ. ರಾಜ್ಯ ಸರಕಾರ ಚೆನ್ನಪ್ಪಗೌಡ ಸೇರಿದಂತೆ ಮಳೆ ಹಾನಿಗೆ ಸಿಲುಕಿರುವ ರೈತರ ನೆರವಿಗೆ ಧಾವಿಸಬೇಕೆಂದು ಶಾಸಕ ಟಿ.ಡಿ.ರಾಜೇಗೌಡರು ಆಗ್ರಹಿಸಿದ್ದಾರೆ.

ಪಟ್ಟಣದ ಕೆ.ವಿ.ಆರ್. ವೃತ್ತದ ಬಳಿ ರೈತ ಚನ್ನಪ್ಪಗೌಡರ ಆತ್ಮಹತ್ಯೆಗೆ ಸರಕಾರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೇಸ್ ಆಯೋಜಿಸಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರವಾಹದಲ್ಲಿ ಮನೆ, ತೋಟ ಕಳೆದುಕೊಂಡವರಿಗೆ ಇದುವರೆಗೂ ನಯಾ ಪೈಸೆ ಪರಿಹಾರ ಬಿಡುಗಡೆ ಆಗಿಲ್ಲ. ಮುಖ್ಯಮಂತ್ರಿ ರೈತರ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದರೂ ರೈತರ ಪರ ನಿಲ್ಲುತ್ತಿಲ್ಲ. ರಾಜ್ಯ ಸರಕಾರಕ್ಕೆ ರೈತರ ಪರ ಕೆಲಸ ಮಾಡುವ ಯೋಗ್ಯತೆ ಇಲ್ಲ. ಸಿಕ್ಕಿರುವ ಅಧಿಕಾರವನ್ನು ರಾಜಕೀಯ ದ್ವೇಷಕ್ಕೆ ಬಳಸುತ್ತಿದೆ. ಸಂಚಾರಿ ನಿಯಮಗಳ ಪಾಲನೆ ನೆದಲ್ಲಿ ಸರಕಾರಗಳು ಪೊಲೀಸ್ ಇಲಾಖೆ ಮೂಲಕ ಜನರ ಮೇಲೆ ದುಬಾರಿ ದಂಡ ಹಾಕಿಸಿ ಲೂಟಿ ಮಾಡುತ್ತಿವೆ. ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದಲ್ಲಿ ಬಿಜೆಪಿಯವರು ಅಧಿಕಾರ ಬಿಟ್ಟು ತೊಲಗಲಿ, ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದು ರೈತರ ಕಣ್ಣೀರು ಒರೆಸುತ್ತೇವೆ. ಈಗಾಗಲೇ ರಾಜ್ಯದ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ಕೈಗಾರಿಕೆಗಳು ಉತ್ಪಾದನೆ ನಿಲ್ಲಿಸುತ್ತಿವೆ, ಇದರಿಂದ ಉದ್ಯೋಗ ಹೆಚ್ಚಳ ಮಾಡುವ ಬದಲಿಗೆ ನಿರುದ್ಯೋಗವೇ ಹೆಚ್ಚುತ್ತಿದೆ ಎಂದು ಲೇವಡಿ ಮಾಡಿದರು.

ನಾನು ಮಲೆನಾಡು ಅಭಿವೃದ್ಧಿ ಮಂಡಲಿ ಅಧ್ಯಕ್ಷನಾಗಿದ್ದಾಗ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದ 15 ಕೋಟಿ ರೂ. ಅನುದಾನವನ್ನು ಈಗ ತಡೆ ಹಿಡಿಯಲಾಗಿದೆ. ಕೇಂದ್ರದಲ್ಲಿ ಮೋದಿ ಡಾಲರನ್ನು 15 ರೂ. ಗೆ ತರುವ ಭರವಸೆಯನ್ನು ಕೊಟ್ಟಿದ್ದರು. ಇದು ಸುಳ್ಳಾಗಿದೆ. ಒಂದು ವೇಳೆ ಇವರು ಈ ಬೆಲೆಗೆ ಡಾಲರ್ ತಂದಲ್ಲಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಂಸದರ ಮನೆಯ ಜೀತ ಮಾಡುತ್ತೇನೆಂದು ಸವಾಲು ಹಾಕಿದ ಅವರು, ಶಾರದಾ ಮಠ, ರಂಭಾಪುರಿ ಮಠ ಮತ್ತು ನ.ರಾ.ಪುರದ ಬಸ್ತಿಮಠಕ್ಕೆ ಮೀಸಲಿಟ್ಟ ಅನುದಾನವನ್ನು ಬಿಜೆಪಿ ಸರಕಾರ ತಡೆ ಹಿಡಿದಿದೆ. ಇಂತವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ರಮೇಶ್ ಭಟ್ ಮಾತನಾಡಿ, ರಾಜ್ಯದಲ್ಲಿ ರೈತ ಚೆನ್ನಪ್ಪಗೌಡರ ಆತ್ಮಹತ್ಯೆ ಒಂದೇ ಅಲ್ಲ, ಇಂತಹ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ರೈತರಿಗೆ ಸರಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಎನ್‍ಡಿಎ-1ರ ಆಡಳಿತದ 4 ವರ್ಷ ಕಾಲ ಏನು ಕೆಲಸ ಮಾಡದೇ ಜನರ ಬೆಂಬಲ ಕಳೆದು ಕೊಂಡಿದ್ದ ಮೋದಿ, ಕೊನೆ ಅವಧಿಯಲ್ಲಿ ಪುಲ್ವಾಮ ದಾಳಿ ನೆಪದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ತನ್ನ ಲಾಭಕ್ಕೆ ಬಳಸಿಕೊಂಡಿತು ಎಂದು ಟೀಕಿಸಿದರು. 

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾರನಕೂಡಿಗೆ ನಟರಾಜ್ ಮಾತನಾಡಿ, ಮಾಜಿ ಶಾಸಕ ಡಿ.ಎನ್.ಜೀವರಾಜ್, ಸಾವಿನ ಮನೆ ಮತ್ತು ತಿಥಿ ಮನೆಯಲ್ಲಿ ಹಾಲಿ ಶಾಸಕ ಟಿ.ಡಿ.ರಾಜೇಗೌಡರ ಬಗ್ಗೆ ಇಲ್ಲಸಲ್ಲದನ್ನು ಹೇಳಿ ಅಪಪ್ರಚಾರ ಮಾಡುತ್ತಾ ಶಾಸಕರ ಹೆಸರಿಗೆ ಮಸಿ ಬಳೆಯುವ ಕುತಂತ್ರ ಮಾಡುತ್ತಿದ್ದಾರೆ. ಶಾಸಕರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲದ ಇವರು ಇಂತಹ ನೀಚ ರಾಜಕಾರಣ ಮುಂದುವರಿಸಿದಲ್ಲಿ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಚಂದ್ರಮತಿ ತಿಮ್ಮಪ್ಪ, ಸದಸ್ಯೆ ರೇಖಾ ರವಿರಾಜ್, ಕೆ.ಆರ್.ವೆಂಕಟೇಶ್, ಪ.ಪಂ. ಸದಸ್ಯೆ ಆಶಾದಿನೇಶ್, ರೂಪಾಮುರಳಿ, ಲತಾಗುರುದತ್ತ್, ಪಕ್ಷದ ಮುಖಂಡರಾದ ಕೆ.ಸಿ.ವೆಂಕಟೇಶ್, ಕಾನೊಳ್ಳಿ ಕೃಷ್ಣಪ್ಪ, ಪುಟ್ಟಪ್ಪಹೆಗ್ಡೆ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಕಿಲಾಗುಂಡಪ್ಪ, ಉಮೇಶಪೂದುವಾಳ್, ಭಾಸ್ಕರ್ ನಾಯ್ಕ, ಕೆ.ಸಿ.ಮಹಾಬಲ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News