ಕನ್ನಡ ಭಾಷೆಯ ವಿಚಾರದಲ್ಲಿ ರಾಜಿ ಮಾಡುವುದಿಲ್ಲ: ಅಮಿತ್ ಶಾ ಹೇಳಿಕೆಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ

Update: 2019-09-16 15:48 GMT

ಬೆಂಗಳೂರು, ಸೆ.16: ಕನ್ನಡ ಭಾಷೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

"ನಮ್ಮ ದೇಶದ ಎಲ್ಲಾ ಅಧಿಕೃತ ಭಾಷೆಗಳು ಸಮಾನವಾಗಿವೆ. ಆದಾಗ್ಯೂ, ಕರ್ನಾಟಕದ ಮಟ್ಟಿಗೆ ಕನ್ನಡವು ಪ್ರಮುಖ ಭಾಷೆಯಾಗಿದೆ. ನಾವು ಎಂದಿಗೂ ಅದರ ಪ್ರಾಮುಖ್ಯತೆಯನ್ನು ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಕನ್ನಡ ಮತ್ತು ನಮ್ಮ ರಾಜ್ಯದ ಸಂಸ್ಕೃತಿಯನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

'ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ‌ ಯಾವುದೇ ತಾರತಮ್ಯ ಸಲ್ಲದು‌. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಷ್ಟೇ, ಗೃಹ ಸಚಿವ ಅಮಿತ್ ಶಾ ಅವರು, ಹಿಂದಿ ದಿವಸ್ ಕಾರ್ಯಕ್ರಮವನ್ನುದ್ದೇಶಿಸಿ, ‘ಹಿಂದಿ’ ರಾಷ್ಟ್ರಭಾಷೆಯನ್ನಾಗಿ ಗುರುತಿಸುವ ಅಗತ್ಯತೆ ಇದೆ ಎಂದಿದ್ದರು. ಈ ಹೇಳಿಕೆಗೆ ಹಲವು ರಾಜ್ಯಗಳ ನಾಯಕರು ವಿರೋಧಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನ್ನಡ ಪರ ಮಾತುಗಳನ್ನಾಡಿರುವುದು ಮಹತ್ವ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News