ಹೆಲ್ಮೆಟ್ ಧರಿಸದ ಈ ಬೈಕ್ ಸವಾರನನ್ನು ತಡೆದ ಪೊಲೀಸರಿಗೆ ಕಾದಿತ್ತು ಅಚ್ಚರಿ !

Update: 2019-09-17 06:18 GMT
ಝಕೀರ್ ಮೆಮೊನ್ (Photo: news18)

ಅಹ್ಮದಾಬಾದ್: ಹೆಲ್ಮೆಟ್ ಧರಿಸದೇ ಇದ್ದ ಬೈಕ್ ಸವಾರನೊಬ್ಬನನ್ನು ಛೋಟಾ ಉದೇಪುರ್ ಜಿಲ್ಲೆಯ ಬೊಡೇಲಿ ಪಟ್ಟಣದಲ್ಲಿ ತಡೆದು ನಿಲ್ಲಿಸಿ ದಂಡ ಪಾವತಿಸುವಂತೆ ಸೂಚಿಸಿದ ಸಂಚಾರ ಪೊಲೀಸರಿಗೆ ಅಚ್ಚರಿ ಕಾದಿತ್ತು. ಝಕೀರ್ ಮೆಮೊನ್ ಎಂಬ ಹೆಸರಿನ ಈ ಬೈಕ್ ಸವಾರನಿಗೆ ವಿಚಿತ್ರ ಸಮಸ್ಯೆಯಿತ್ತು. ಆತನ ತಲೆಯ ಗಾತ್ರ ಅದೆಷ್ಟು ದೊಡ್ಡದಾಗಿದೆಯೆಂದರೆ ಮಾರುಕಟ್ಟೆಯಲ್ಲಿ ಲಭ್ಯ ಯಾವುದೇ ಹೆಲ್ಮೆಟ್ ಧರಿಸುವುದು ಆತನಿಗೆ ಅಸಾಧ್ಯವಾಗಿತ್ತು.

"ನಾನು ಕಾನೂನನ್ನು ಗೌರವಿಸುತ್ತೇನೆ ಹಾಗೂ ಹೆಲ್ಮೆಟ್ ಧರಿಸಿ ನಿಯಮ ಪಾಲಿಸಲು ಇಚ್ಚಿಸುತ್ತೇನೆ, ಆದರೆ ಹೆಲ್ಮೆಟ್‍ಗಾಗಿ ಎಲ್ಲಾ ಅಂಗಡಿಗಳಿಗೆ ಸುತ್ತಿದರೂ ನನ್ನ ತಲೆಯ ಗಾತ್ರಕ್ಕೆ ಸರಿ ಹೊಂದುವಂತಹ ಹೆಲ್ಮೆಟ್ ದೊರಕಿಲ್ಲ. ನನ್ನ ವಾಹನದ ಎಲ್ಲಾ ದಾಖಲೆಗಳು ನನ್ನ ಬಳಿಯಿವೆ ಆದರೆ ಹೆಲ್ಮೆಟ್ ವಿಚಾರದಲ್ಲಿ ನಾನು ಅಸಹಾಯಕ. ನನ್ನ ಸಮಸ್ಯೆಯ ಬಗ್ಗೆ ಪೊಲೀಸರಿಗೆ ಹೇಳಿದ್ದೇನೆ,'' ಎಂದು ಮೆಮೊನ್ ಹೇಳುತ್ತಾರೆ.

ಬೊಡೇಲಿ ಪಟ್ಟಣದಲ್ಲಿ ಹಣ್ಣು ಹಂಪಲು ಅಂಗಡಿ ಹೊಂದಿರುವ ಮೆಮೊನ್ ಮತ್ತವರ ಕುಟುಂಬಕ್ಕೆ ಹೊಸ ಸಂಚಾರ ನಿಯಮಗಳ ನಂತರ ಅವರದ್ದೇ ಚಿಂತೆಯಾಗಿದೆಯಲ್ಲದೆ ಹೆಚ್ಚುವರಿ ದಂಡ ಪಾವತಿಸಬೇಕೇನೋ ಎಂಬ ಭಯವೂ ಇದೆ.

ಆದರೆ ಪೊಲೀಸ್ ಇಲಾಖೆ ಮೆಮೊನ್ ಅವರ ಸಮಸ್ಯೆಯನ್ನು ಅರಿತು ಅವರಿಗೆ ದಂಡ ವಿಧಿಸದೇ ಇರಲು ನಿರ್ಧರಿಸಿದ್ದಾರೆ, ಎಂದು ಎಎಸ್ಸೈ ವಸಂತ್ ರಥ್ವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News