ಲೈಂಗಿಕ ಕಿರುಕುಳ ಪ್ರಕರಣ | ಅರ್ಜುನ ಪ್ರಶಸ್ತಿ ಪುರಸ್ಕೃತ ಸಿಆರ್‌ಪಿಎಫ್ ಅಧಿಕಾರಿ ತಪ್ಪಿತಸ್ಥ, ವಜಾ ನೋಟಿಸ್ ಜಾರಿ

Update: 2024-04-27 15:44 GMT

 ಖಜನ್ ಸಿಂಗ್ | PC ; NDTV 

ಹೊಸದಿಲ್ಲಿ : ಕೇಂದ್ರೀಯ ಮೀಸಲು ಪೋಲಿಸ್ ಪಡೆ (ಸಿಆರ್‌ಪಿಎಫ್)ಯ ಉನ್ನತ ಶ್ರೇಣಿಯ ಅಧಿಕಾರಿಯೋರ್ವರು ಲೈಂಗಿಕ ಕಿರುಕುಳದ ತಪ್ಪಿತಸ್ಥರೆನ್ನುವುದು ಸಾಬೀತಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲು ನೋಟಿಸನ್ನು ಜಾರಿಗೊಳಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸಿಆರ್‌ಪಿಎಫ್‌ನ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ದರ್ಜೆಯ ಮುಖ್ಯ ಕ್ರೀಡಾಧಿಕಾರಿ ಖಜನ್ ಸಿಂಗ್ ಅವರು ಅರೆಸೇನಾ ಪಡೆಯಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಈ ಮೂಲಗಳು ಹೇಳಿವೆ.

ಮಹಿಳೆಯರ ಆರೋಪಗಳ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಈ ಬಗ್ಗೆ ನಡೆಸಿದ ತನಿಖೆಯಲ್ಲಿ ಸಿಂಗ್ ತಪ್ಪಿತಸ್ಥ ಎನ್ನುವುದು ಸಾಬೀತಾಗಿದೆ. ಬಳಿಕ ಸಿಆರ್‌ಪಿಎಫ್ ಲೋಕಸೇವಾ ಆಯೋಗ (ಯುಪಿಎಸ್‌ಸಿ)ಕ್ಕೆ ವರದಿ ಸಲ್ಲಿಸಿದ್ದು, ಸಿಂಗ್ ಅವರನ್ನು ವಜಾಗೊಳಿಸುವಂತೆ ಅದು ಗೃಹಸಚಿವಾಲಯವನ್ನು ಕೇಳಿಕೊಂಡಿತ್ತು. ಸಚಿವಾಲಯವು ಈ ಪ್ರಸ್ತಾವವನ್ನು ಅನುಮೋದಿಸಿದ್ದು, ಸಿಆರ್‌ಪಿಎಫ್ ಸಿಂಗ್‌ಗೆ ವಜಾ ನೋಟಿಸ್ ಜಾರಿಗೊಳಿಸಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಸಿಆರ್‌ಪಿಎಫ್‌ನ ಮುಖ್ಯ ಕ್ರೀಡಾಧಿಕಾರಿಯಾಗುವ ಮುನ್ನ ಸೀಂಗ್ 1986ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ರಜತ ಪದಕವನ್ನು ಗೆದ್ದಿದ್ದು, ಇದು 1951ರ ಬಳಿಕ ಈಜು ಸ್ಪರ್ಧೆಯಲ್ಲಿ ಭಾರತದ ಮೊದಲ ಪದಕವಾಗಿತ್ತು.

ಮುಂಬೈನಲ್ಲಿ ನಿಯೋಜಿತರಾಗಿರುವ ಸಿಂಗ್ ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ವಜಾ ನೋಟಿಸ್‌ಗೆ ಉತ್ತರಿಸಲು ಅವರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಸಿಂಗ್ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದು, ಒಂದರಲ್ಲಿ ವಜಾ ನೋಟಿಸ್ ಹೊರಡಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ತನಿಖೆಯು ಪ್ರಗತಿಯಲ್ಲಿದೆ.ಈ ಹಿಂದೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ ಸಿಂಗ್, ಇದು ಸಂಪೂರ್ಣ ಸುಳ್ಳು ಮತ್ತು ತನ್ನ ವ್ಯಕ್ತಿತ್ವಕ್ಕೆ ಕಳಂಕ ತರಲು ಕುತಂತ್ರವಾಗಿದೆ ಎಂದು ಹೇಳಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News