ದಲಿತ ಎಂಬ ಕಾರಣ: ಗೊಲ್ಲರಹಟ್ಟಿ ಪ್ರವೇಶಕ್ಕೆ ಸಂಸದ ನಾರಾಯಣಸ್ವಾಮಿಗೆ ಅಡ್ಡಿ

Update: 2019-09-17 06:40 GMT

ತುಮಕೂರು: ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಅವರನ್ನು ದಲಿತ ಎಂಬ ಕಾರಣಕ್ಕೆ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಪ್ರವೇಶಕ್ಕೆ ಅಡ್ಡಿಪಡಿಸಿರುವ ಘಟನೆ ನಡೆದಿದೆ.

ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‍ಆರ್) ಬಳಸಿ ಹಟ್ಟಿಯಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟು, ಮೂಲ ಸೌಕರ್ಯ ಕಲ್ಪಿಸಲು ಸಂಸದ ಎ.ನಾರಾಯಣಸ್ವಾಮಿ ಅವರು ಬಯೋಕಾನ್ ಮತ್ತು ನಾರಾಯಣ ಹೃದಯಾಲಯದ ಅಧಿಕಾರಿಗಳೊಂದಿಗೆ ಪೆಮ್ಮನಹಳ್ಳಿಗೆ ತೆರಳಿದ್ದರು.

ಸಂಸದ ನಾರಾಯಣಸ್ವಾಮಿ ಅವರು ಪೆಮ್ಮನಹಳ್ಳಿಗೆ ಆಗಮಿಸುತ್ತಿರುವ ವಿಚಾರ ತಿಳಿದ ಗ್ರಾಮಸ್ಥರು ಹಟ್ಟಿಯೊಳಕ್ಕೆ ತಾವು ಬರಬಾರದು, ದಯಮಾಡಿ ಸಹಕರಿಸಿ ಎಂದು ಸಂಸದರಿಗೆ ಮನವಿ ಮಾಡಿ ಹಟ್ಟಿಯ ಪ್ರವೇಶ ಮಾಡುವ ಸ್ಥಳದಲ್ಲಿ ಸಂಸದರಿಗೆ ಆಸನದ ವ್ಯವಸ್ಥೆ ಮಾಡಿ, ನಾರಾಯಣಸ್ವಾಮಿ ಅವರೊಂದಿಗೆ ಬಂದಿದ್ದ ಅಧಿಕಾರಿಗಳು ಮತ್ತು ಇತರ ಮುಖಂಡರನ್ನು ಹಟ್ಟಿಯೊಳಕ್ಕೆ ಬರಮಾಡಿಕೊಂಡರು.

ಬಿಜೆಪಿ ಪಕ್ಷದ ಮುಖಂಡರು ಹಾಗೂ ಸಂಸದರು ಸೇರಿದಂತೆ ಹಲವರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ‘ಇನ್ನೂ ಯಾವ ಕಾಲದಲ್ಲಿದ್ದೀರಿ, ಅವರು ಹಟ್ಟಿಯ ಅಭಿವೃದ್ಧಿಗಾಗಿ ಬಂದಿದ್ದಾರೆ. ಗುಡಿಸಲು ಮುಕ್ತವಾಗಿಸಿ ಹಟ್ಟಿಗೆ ಮೂಲ ಸೌಕರ್ಯ ಕಲ್ಪಿಸಲು ಬಂದಿರುವ ಅವರಿಗೆ ಒಳಗೆ ಬರಲು ಅವಕಾಶ ಮಾಡಿಕೊಡಿ’ ಎಂದು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.

ಎ.ನಾರಾಯಣಸ್ವಾಮಿ ಅವರೂ ಸಹಕರಿಸುವಂತೆ ಕೋರಿದರು. ಆದರೆ, ಇದ್ಯಾವುದಕ್ಕೂ ಮಣಿಯದ ಗ್ರಾಮದ ಕೆಲ ಯುವಕರು, ಮುಖಂಡರು ಪಟ್ಟು ಬಿಡದೇ, ಅವರನ್ನು ಹಟ್ಟಿಯೊಳಗೆ ಬಿಟ್ಟುಕೊಳ್ಳದೇ ಇರುವುದರಿಂದ ಸಂಸದರು ವಾಪಾಸ್ ತೆರಳಿದ್ದಾರೆ.

ಈ ಹಿಂದೆಯೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಅಸ್ಪೃಶ್ಯತೆ ಆಚರಣೆ ಬೆಳಕಿಗೆ ಬಂದಿತ್ತು. ಗೊಲ್ಲರಹಟ್ಟಿ ಮೂಲಕ ದಲಿತ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಅಡ್ಡಿಪಡಿಸುತ್ತಿದ್ದರಿಂದ, ದಲಿತ ವಿದ್ಯಾರ್ಥಿಗಳು ನಾಲ್ಕು ಕಿಲೋ ಮೀಟರ್ ಬಳಸಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಈ ವಿಚಾರ ಬೆಳಕಿಗೆ ಬಂದ ನಂತರ ಕೆಲ ಮುಖಂಡರು ಮಲ್ಲಿಗೆರೆ ಗೊಲ್ಲರಹಟ್ಟಿಗೆ ತೆರಳಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಪೆಮ್ಮನಹಳ್ಳಿಗೆ ಅಧಿಕಾರಿಗಳ ದೌಡು: ಸಂಸದರಿಗೆ ಅಸ್ಪೃಶ್ಯತೆಯನ್ನು ತೋರಿದ ಪಾವಗಡ ತಾಲ್ಲೂಕು ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಮಾಜ ಕಲ್ಯಾಣಾಧಿಕಾರಿಗಳು, ಪೊಲೀಸರು ಹಾಗೂ ಅಧಿಕಾರಿಗಳು ಇಂದು ಭೇಟಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News