ಹಿಂದಿ ರಾಷ್ಟ್ರ ಭಾಷೆಗೆ ವಿರೋಧಿಸುವವರು ದೇಶವನ್ನು ಪ್ರೀತಿಸುವವರಲ್ಲ: ತ್ರಿಪುರಾ ಸಿಎಂ

Update: 2019-09-17 08:31 GMT

ಅಗರ್ತಲಾ: ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆಯನ್ನಾಗಿಸುವುದಕ್ಕೆ ವಿರೋಧ ವ್ಯಕ್ತಪಡಿಸುವವರು ತಮ್ಮ ದೇಶವನ್ನು ಪ್ರೀತಿಸುವವರಲ್ಲ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ.

ಅಗರ್ತಲಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ, ‘ಹಿಂದಿ ದಿವಸ್’ ಕಾರ್ಯಕ್ರಮದಲ್ಲಿ ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುವ ಭಾಷೆಯಾಗುವ ಕುರಿತಂತೆ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

"ನಮ್ಮ ದೇಶದ ಹೆಚ್ಚಿನ ಜನರು ಹಿಂದಿ ಮಾತನಾಡುವವರಾಗಿರುವುದರಿಂದ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡುವುದಕ್ಕೆ ನನ್ನ ಬೆಂಬಲವಿದೆ,'' ಎಂದ ಬಿಪ್ಲಬ್ ದೇಬ್ ತಾನು ಇಂಗ್ಲಿಷ್ ಭಾಷಾ ವಿರೋದಿಯಲ್ಲ ಹಾಗೂ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಲೂ ಇಲ್ಲ ಎಂದರು.

ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿರದೇ ಇದ್ದರೆ ದೇಶದಲ್ಲಿ ಅಧಿಕೃತ ಕೆಲಸ ಕಾರ್ಯಗಳಿಗೆ ಇಂಗ್ಲಿಷ್ ಭಾಷೆಯ ಅಗತ್ಯವೇ ಇರುತ್ತಿರಲಿಲ್ಲ ಎಂದು ಅವರು ಹೇಳಿದರು. ``ವಸಾಹತುಶಾಹಿ ನಿಷ್ಠೆಯಿಂದಾಗಿ ಹಲವು ಜನರಿಗೆ ಇಂಗ್ಲಿಷ್ ಪ್ರತಿಷ್ಠೆಯ ಚಿಹ್ನೆಯಾಗಿತ್ತು,'' ಎಂದು ಹೇಳಿದ ಬಿಪ್ಲಬ್ ದೇಬ್, ``ಒಂದು ದೇಶದ ಪ್ರಗತಿಗೆ ಇಂಗ್ಲಿಷ್ ಅಗತ್ಯವಿಲ್ಲ, ಹಾಗೇನಾದರೂ ಇದ್ದಿದ್ದರೆ ಜರ್ಮನಿ, ಚೀನಾ, ಜಪಾನ್, ರಷ್ಯಾ ಹಾಗೂ ಇಸ್ರೇಲ್ ಅಭಿವೃದ್ಧಿಗೊಳ್ಳುತ್ತಿರಲಿಲ್ಲ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News