ನೋಂದಣಿ ಸಂಖ್ಯೆಯಿಲ್ಲದೆ ಸ್ಕೂಟರ್ ಮಾರಾಟ ಮಾಡಿದ್ದ ಡೀಲರ್‌ಗೆ ಒಂದು ಲಕ್ಷ ರೂ.ದಂಡ!

Update: 2019-09-17 10:15 GMT
ಸಾಂದರ್ಭಿಕ ಚಿತ್ರ

ಭುವನೇಶ್ವರ(ಒಡಿಶಾ),ಸೆ.17: ನೋಂದಣಿ ಸಂಖ್ಯೆಯಿಲ್ಲದೆ ಸ್ಕೂಟರ್ ಮಾರಾಟ ಮಾಡಿದ್ದಕ್ಕಾಗಿ ಇಲ್ಲಿಯ ದ್ವಿಚಕ್ರ ವಾಹನಗಳ ವಿತರಕನೋರ್ವನಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬರೋಬ್ಬರಿ ಒಂದು ಲಕ್ಷ ರೂ.ಗಳ ದಂಡವನ್ನು ವಿಧಿಸಿದ್ದಾರೆ. ಪರಿಷ್ಕೃತ ಮೋಟರ್ ವಾಹನಗಳ ಕಾಯ್ದೆಯು ಇತ್ತೀಚಿಗೆ ಜಾರಿಗೊಂಡ ನಂತರ ಇದು ಇಂತಹ ಮೊದಲ ದಂಡವಾಗಿದೆ.

ಸೆ.12ರಂದೇ ಈ ದಂಡವನ್ನು ವಿಧಿಸಲಾಗಿದೆಯಾದರೂ ಅದರ ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬಹಿರಂಗಗೊಂಡಿದೆ.

ಕವಿತಾ ಪಾಂಡಾ ಆ.28ರಂದು ಭುವನೇಶ್ವರದ ಖಿಮ್ಜಿ ಹೊಂಡಾ ಡೀಲರ್ ಬಳಿಯಿಂದ ಹೊಂಡಾ ಆ್ಯಕ್ಟಿವಾ ಸ್ಕೂಟರ್‌ನ್ನು ಖರೀದಿಸಿದ್ದರು. ಸೆ.12ರಂದು ಕಟಕ್‌ನ ಬರಂಗ್ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಆರ್‌ಟಿಒ ಅಧಿಕಾರಿಗಳು ಪಾಂಡಾ ಅವರ ಸ್ಕೂಟರ್‌ನ್ನು ತಡೆದು ನೋಂದಣಿ ಸಂಖ್ಯೆ ಹೊಂದಿಲ್ಲ ಎಂಬ ಕಾರಣದಿಂದ ಅದನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಬಳಿಕ ಮೋಟರ್ ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಡೀಲರ್‌ಗೆ ಒಂದು ಲಕ್ಷ ರೂ.ದಂಡ ವಿಧಿಸಿದ್ದ ಅವರು ಡೀಲರ್‌ನ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವಂತೆ ಭುವನೇಶ್ವರದ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

ಹಳೆಯ ಮತ್ತು ನೂತನ ಮೋಟರ್ ವಾಹನ ಕಾಯ್ದೆಯಡಿ ಡೀಲರ್ ಯಾವುದೇ ವಾಹನವನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮುನ್ನ ನೋಂದಣಿ ಸಂಖ್ಯೆ,ವಿಮೆ ಮತ್ತು ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿರಬೇಕು.

ಹೊಸ ಕಾಯ್ದೆಯಡಿ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆದರೆ ವಾಹನವನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮುನ್ನ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳುವುದು ಯಾವಾಗಲೂ ಡೀಲರ್ ಜವಾಬ್ದಾರಿಯಾಗಿದೆ ಎಂದು ರಾಜ್ಯದ ಸಾರಿಗೆ ಆಯುಕ್ತ ಸಂಜೀವ ಪಾಂಡಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News