ಡಿ.ಕೆ.ಶಿವಕುಮಾರ್ ಗೆ ಮತ್ತೆ ಹಿನ್ನಡೆ: ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ವಜಾ

Update: 2019-09-17 14:45 GMT

ಬೆಂಗಳೂರು, ಸೆ.17: ಹೊಸದಿಲ್ಲಿಯ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ನೀಡಿರುವ ಸಮನ್ಸ್ ರದ್ದು ಕೋರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಡಿಕೆಶಿಯ ಮೂವರು ಆಪ್ತರನ್ನು ನಾಲ್ಕು ವಾರಗಳ ಕಾಲ ಬಂಧಿಸದಂತೆ ಆದೇಶ ಹೊರಡಿಸಿದೆ.

ಈ ಕುರಿತು ಆರೋಪಿಗಳಾದ ಡಿಕೆಶಿ, ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಈಡಿ ನೀಡಿದ್ದ ಸಮನ್ಸ್ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠವು ಸಿಆರ್‌ಪಿಸಿ 482 ಅಡಿ ವಜಾಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಅಲ್ಲದೆ, ಅರ್ಜಿ ಮೇಲ್ಮನವಿ ವಿಚಾರಣೆಗೆ ಅರ್ಹವಾಗಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಿಭಾಗೀಯ ನ್ಯಾಯಪೀಠವು ವಜಾಗೊಳಿಸಿತು.

ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ಕೋರಿ ಹಾಗೂ ಈಡಿ ಬಂಧಿಸದಂತೆ ರಕ್ಷಣೆ ಕೋರಿ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ ಸಲ್ಲಿಸಿದ್ದ ಅರ್ಜಿ ಸಂಬಂಧ ನ್ಯಾಯಪೀಠವು ಡಿಕೆಶಿ ಆಪ್ತರನ್ನು ನಾಲ್ಕು ವಾರ ಬಂಧಿಸದಂತೆ ಹಾಗೂ ಆರೋಪಿಗಳು ಈಡಿ ಅವರು ವಿಚಾರಣೆಗೆ ಕರೆದಾಗ ಹಾಜರಾಗಲು, ವಿಚಾರಣೆಗೆ ಸಹಕರಿಸಲು ಸೂಚಿಸಿ, ಅರ್ಜಿಯನ್ನು ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News