ಡಿಕೆಶಿಗೆ ಅ.1ರವರೆಗೆ ನ್ಯಾಯಾಂಗ ಬಂಧನ

Update: 2019-09-17 16:32 GMT

ಹೊಸದಿಲ್ಲಿ,ಸೆ.17: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆ.3ರಂದು ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಬಂಧಿಸಲ್ಪಟ್ಟಿರುವ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಅ.1ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ದಿಲ್ಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.

ಶಿವಕುಮಾರ್ ಅವರನ್ನು ಮೊದಲು ಆಸ್ಪತ್ರೆಗೆ ಕರೆದೊಯ್ಯುವಂತೆ ಮತ್ತು ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ವೈದ್ಯರು ಸೂಚಿಸಿದರೆ ಮಾತ್ರ ತಿಹಾರ್ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ವಿಶೇಷ ನ್ಯಾಯಾಧೀಶ ಅಜಯಕುಮಾರ ಕುಹಾರ್ ಅವರು ಈ.ಡಿ.ಗೆ ನಿರ್ದೇಶ ನೀಡಿದರು.

ನ್ಯಾಯಾಲಯವು ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ಅಪರಾಹ್ನ 3:30ಕ್ಕೆ ಕೈಗೆತ್ತಿಕೊಳ್ಳಲಿದೆ.

 ಶಿವಕುಮಾರ್ ಅವರು ಆಸ್ಪತ್ರೆಗೆ ದಾಖಲಿಸಲ್ಪಟ್ಟರೆ ಸೆಂಟ್ರಲ್ ಜೈಲಿನ ಅಧೀಕ್ಷಕರು ಅವರ ಕಸ್ಟಡಿಯನ್ನು ವಹಿಸಿಕೊಳ್ಳಬೇಕು ಮತ್ತು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದಾಗ ಮಾತ್ರ ವೈದ್ಯರು ಅವರನ್ನು ಕಸ್ಟಡಿಗೆ ಹಸ್ತಾಂತರಿಸಬೇಕು. ಜೈಲು ಅಧೀಕ್ಷಕರು ಅವರು ಆರೋಪಿಗೆ ಕಾವಲನ್ನೊದಗಿಸಬೇಕು ಎಂದೂ ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಶಿವಕುಮಾರ್ ಅವರನ್ನು ಜೈಲಿಗೆ ಕರೆದೊಯ್ದ ಪಕ್ಷದಲ್ಲಿ ಅಲ್ಲಿ ಕರ್ತವ್ಯದಲ್ಲಿರುವ ವೈದ್ಯರ ಒಪ್ಪಿಗೆಯೊಂದಿಗೆ ಅವರು ತನ್ನ ಔಷಧಿಗಳನ್ನು ಸೇವಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವು ತಿಳಿಸಿದೆ.

ಶಿವಕುಮಾರ್ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು ಅವರ ರಕ್ತದೊತ್ತಡವು ಏರಿಳಿತಗಳಿಂದ ಕೂಡಿದೆ. ಅವರು ಈ ಮೊದಲು ಆ್ಯಂಜಿಯೊಪ್ಲಾಸ್ಟಿ ಮಾಡಿಸಿಕೊಂಡಿದ್ದಾರೆ ಮತ್ತು ಭಾರೀ ಪ್ರಮಾಣದಲ್ಲಿ ಔಷಧಿಗಳನ್ನು ಸೇವಿಸುತ್ತಿದ್ದಾರೆ ಎಂಬ ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿತು.

ಶಿವಕುಮಾರ್ ಅವರ ವಿಚಾರಣೆ ಅಪೂರ್ಣವಾಗಿದೆ ಎಂದು ತಿಳಿಸಿದ ಈ.ಡಿ.,ನ್ಯಾಯಾಂಗ ಬಂಧನದಲ್ಲಿ ಅವರನ್ನು ಪ್ರಶ್ನಿಸಲು ನ್ಯಾಯಾಧೀಶರ ಅನುಮತಿಯನ್ನು ಕೋರಿತು.

ಶಿವಕುಮಾರ್ ಅವರ ಆರೋಗ್ಯ ಸ್ಥಿತಿಯಿಂದಾಗಿ ಅವರನ್ನು ಪರಿಣಾಮಕಾರಿ ವಿಚಾರಣೆಗೆ ಒಳಪಡಿಸಲು ಅವಕಾಶವಾಗುತ್ತಿಲ್ಲ ಎಂದು ಈ.ಡಿ. ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ) ಕೆ.ಎಂ.ನಾಗರಾಜ ಮತ್ತು ವಿಶೇಷ ಸರಕಾರಿ ಅಭಿಯೋಜಕರಾದ ಅಮಿತ್ ಮಹಾಜನ,ಎನ್.ಕೆ.ಮಟ್ಟಾ ಮತ್ತು ನಿತೇಶ ರಾಣಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ನ್ಯಾಯಾಂಗ ಬಂಧನ ವಿಧಿಸಬೇಕೆಂಬ ಈ.ಡಿ.ಮನವಿಯನ್ನು ವಿರೋಧಿಸಿದ ಶಿವಕುಮಾರ್ ಪರ ಹಿರಿಯ ನ್ಯಾಯವಾದಿಗಳಾದ ಎ.ಎಂ.ಸಿಂಘ್ವಿ ಮತ್ತು ಮುಕುಲ್ ರೋಹಟ್ಗಿ ಅವರು, ಶಿವಕುಮಾರ್ ಆರೋಗ್ಯ ಸ್ಥಿತಿಯು ತೀರ ಗಂಭೀರವಾಗಿದೆ ಮತ್ತು ಹೃದಯಾಘಾತಕ್ಕೆ ಅವರು ಹತ್ತಿರವಾಗಿದ್ದಾರೆ. ಆದ್ದರಿಂದ ವೈದ್ಯಕೀಯ ಕಾರಣಗಳಿಂದ ಅವರಿಗೆ ಜಾಮೀನು ಮಂಜೂರು ಮಾಡುವಂತೆ ನ್ಯಾಯಾಲಯವನ್ನು ನಿವೇದಿಸಿಕೊಂಡರು.

ನ್ಯಾಯಾಲಯದ ನಿರ್ದೇಶದಂತೆ ಶಿವಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಮತ್ತು ಅವರ ಅನಾರೋಗ್ಯದಿಂದಾಗಿ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಎಎಸ್‌ಜಿ ನ್ಯಾಯಾಲಯಕ್ಕೆ ತಿಳಿಸಿದರು.

 ಶಿವಕುಮಾರ್ ಅವರ ಬಳಿಯಿಂದ ಕೇವಲ 41 ಲ.ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ಈ.ಡಿ.ಆರೋಪಿಸಿರುವಂತೆ 8.5 ಕೋ.ರೂ.ಗಲ್ಲ ಮತ್ತು ಈಗ ಅಚ್ಚರಿಯೆಂಬಂತೆ ಈ ಮೊತ್ತ 143 ಕೋ.ರೂ.ಗೇರಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಸಿಂಘ್ವಿ,ಈ.ಡಿ. ತಾರತಮ್ಯದ ಧೋರಣೆ ಮತ್ತು ದುರುದ್ದೇಶವನ್ನು ಹೊಂದಿದೆ ಮತ್ತು ತನಿಖೆಯ ಕುರಿತು ನ್ಯಾಯಾಲಯದ ಎದುರು ಸುಳ್ಳು ಹೇಳುತ್ತಿದೆ. ಶಿವಕುಮಾರ್ ಸುಮಾರು 317 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂಬ ಈ.ಡಿ.ಹೇಳಿಕೆಯು ಮಾಧ್ಯಮಗಳು ಮತ್ತು ಸಾರ್ವಜನಿಕರ ಕಣ್ಣಲ್ಲಿ ಅವರ ವರ್ಚಸ್ಸನ್ನು ಕೆಡಿಸುವ ಉದ್ದೇಶವನ್ನು ಮಾತ್ರ ಹೊಂದಿದೆ ಎಂದು ಆರೋಪಿಸಿದರು.

ಶಿವಕುಮಾರ್ ಅವರು ಏಳು ಬಾರಿ ಶಾಸಕರಾಗಿದ್ದಾರೆ ಮತ್ತು ಅವರು ದೇಶವನ್ನು ತೊರೆಯುವ ಅಪಾಯವಿಲ್ಲ ಎಂದು ಹೇಳಿದ ರೋಹಟ್ಗಿ,ಪ್ರಕರಣವು ದಾಖಲೆಗಳ ಸಾಕ್ಷಾಧಾರವನ್ನು ಆಧರಿಸಿದೆ ಮತ್ತು ಅವರು ಯಾವುದೇ ಕ್ರಿಮಿನಲ್ ಪೂರ್ವಚರಿತ್ರೆಯನ್ನು ಹೊಂದಿಲ್ಲವಾದ್ದರಿಂದ ಅವರನ್ನು ಕಸ್ಟಡಿಯಲ್ಲಿರಿಸಲು ಯಾವುದೇ ಕಾರಣವಿಲ್ಲ ಎಂದು ವಾದಿಸಿದರು.

 ಇದು ಜಾಮೀನು ಮಂಜೂರು ಮಾಡುವ ಪ್ರಕರಣವಾಗಿದೆ ಮತ್ತು ನ್ಯಾಯಾಲಯವು ಷರತ್ತುಗಳನ್ನು ವಿಧಿಸಬಹುದಾಗಿದೆ. ಅದಿಲ್ಲದಿದ್ದರೆ ಶಿವಕುಮಾರ್ ಅವರಿಗೆ ವೈದ್ಯಕೀಯ ಜಾಮೀನು ನೀಡುವುದನ್ನು ಪರಿಗಣಿಸಬೇಕು ಎಂದು ಅವರು ಕೋರಿಕೊಂಡರು.

 ಜಾಮೀನು ಅರ್ಜಿಯನ್ನು ವಿರೋಧಿಸಿದ ಈ.ಡಿ.,ತಾನು ಶಿವಕುಮಾರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೇನೆ ಎಂದು ತಿಳಿಸಿತು. ಅಕ್ರಮ ಹಣ ವರ್ಗಾವಣೆಯು ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ಮೂಲಕ ನಡೆದಿದೆ ಎಂದು ಅದು ಆರೋಪಿಸಿತು.

ಕಸ್ಟಡಿ ವಿಚಾರಣೆಯ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶಿವಕುಮಾರ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News