ವಿವಿಧ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಕೊಡುಗೆ ಗಮನಾರ್ಹ: ಡಿಸಿಎಂ ಲಕ್ಷ್ಮಣ ಸವದಿ

Update: 2019-09-17 12:49 GMT

ಬಳ್ಳಾರಿ, ಸೆ.17: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಯನ್ನು ಈ ಕಲ್ಯಾಣ ಕರ್ನಾಟಕ ನೀಡಿದೆ. ವಿಶ್ವವೇ ನಿಬ್ಬೆರಗಾಗುವಂತಹ ಜಗಜ್ಯೊತಿ ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಬುನಾದಿ ಹಾಕಿದ ಪವಿತ್ರ ಭೂಮಿ ಇದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಜಿಲ್ಲಾಡಳಿತದ ವತಿಯಿಂದ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ರಝಾಕರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ನಿಝಾಮರ ಆಡಳಿತ ಪ್ರದೇಶವನ್ನು ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರ ದಿಟ್ಟತನದಿಂದ ಕೈಗೊಂಡ ಪೊಲೀಸ್ ಕಾರ್ಯಾಚರಣೆಯಲ್ಲಿ ನಿಝಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ, 1948 ಸೆ.17ರಂದು ಈ ಭಾಗಗಳು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಮೀರ್‌ಉಸ್ಮಾನ್ ಅಲಿಖಾನ್ ಅಂದಿನ ಕೊನೆಯ ನಿಝಾಮನಾಗಿದ್ದನು. ಈ ಮಧ್ಯೆ ಸಂಸ್ಥಾನದಲ್ಲಿ ಸಾಮ್ರಾಜ್ಯ ಶಾಹಿ ಆಡಳಿತ ನಡೆದು ಪ್ರಜೆಗಳಿಗೆ ಹಿಂಸಿಸಲಾಗುತ್ತಿತ್ತು. ದಂಗೆಕೋರರು ಪ್ರಜೆಗಳ ಸುಲಿಗೆ ನಡೆಸುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ಜನರ ಪಾಲಿಗೆ ಇರಲಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ಷೋಭೆ ಉಂಟಾಯಿತು ಎಂದು ಅವರು ಸ್ಮರಿಸಿದರು.

ಕಲಬುರಗಿ ಆರ್ಯ ಸಮಾಜ ಚಳುವಳಿ ಹಾಗೂ ಮತ್ತಿತರ ಸಂಸ್ಥೆಗಳು ಹೋರಾಟಕ್ಕೆ ಇಳಿದವು. ತುಂಗಭದ್ರ ನದಿ ಪ್ರದೇಶದ ಬಳ್ಳಾರಿ ಜಿಲ್ಲೆಯ ಗ್ರಾಮಗಳು ದಂಗೆ ಕೋರರಿಂದ ಹಿಂಸೆಗೊಳಗಾದವರಿಗೆ ರಕ್ಷಣೆ ಸಹಾಯ ಹಸ್ತ ನೀಡಿದವು. ಇವರೆನ್ನಲ್ಲ ನಾವಿಂದೂ ಸ್ಮರಿಸಬೇಕಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಹೈದ್ರಾಬಾದ್-ಕರ್ನಾಟಕ ನಿಝಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 73 ವರ್ಷಗಳಾದ ನೆನಪಿನಲ್ಲಿ ಏರ್ಪಡಿಸಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ನಾನು ಅತ್ಯಂತ ಹರ್ಷದಿಂದ ಪಾಲ್ಗೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News