ಶಿವಮೊಗ್ಗ: ಬ್ಯಾಂಕ್ ಕಚೇರಿಯಲ್ಲಿ ಭಾರೀ ಅಗ್ನಿ ಅವಘಡ, ಹಲವು ಸಾಮಾಗ್ರಿಗಳು ಬೆಂಕಿಗಾಹುತಿ

Update: 2019-09-17 18:33 GMT

ಶಿವಮೊಗ್ಗ, ಸೆ.17: ಜಿಲ್ಲೆಯ ಭದ್ರಾವತಿ ಪಟ್ಟಣದ ಬಿ.ಹೆಚ್.ರಸ್ತೆಯ ಹಾಲಪ್ಪ ವೃತ್ತದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್‍ನಿಂದ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ. 

ಘಟನೆಯಲ್ಲಿ ಸ್ಟ್ರಾಂಗ್ ರೂಂನ ಸೇಫ್ ಲಾಕರ್ ಗಳಲ್ಲಿಟ್ಟಿದ್ದ ಹಣ, ಗ್ರಾಹಕರ ಚಿನ್ನಾಭರಣ ಹಾಗೂ ಪ್ರಮುಖ ದಾಖಲೆಗಳಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲವೂ ಸುರಕ್ಷಿತವಾಗಿವೆ. ಇದರಿಂದ ಬ್ಯಾಂಕ್ ಅಧಿಕಾರಿ-ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತಾಗಿದೆ. 

ಉಳಿದಂತೆ ಬ್ಯಾಂಕ್‍ನ ಪೀಠೋಪಕರಣ, ಕಂಪ್ಯೂಟರ್ ಗಳು, ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ. ಗೋಡೆಗಳಿಗೆ ಹಾನಿಯಾಗಿದೆ. ಅರ್ಧದಷ್ಟು ಕಚೇರಿಯು ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅಂದಾಜಿನ ಪ್ರಕಾರ ಸುಮಾರು 20 ರಿಂದ 30 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದ್ದು, ಪೂರ್ಣ ಪರಿಶೀಲನೆಯ ನಂತರವಷ್ಟೆ ನಷ್ಟದ ಅಂದಾಜು ಲಭ್ಯವಾಗಬೇಕಾಗಿದೆ. ಬ್ಯಾಂಕ್ ಅಧಿಕಾರಿಗಳು ನಷ್ಟದ ಅಂದಾಜು ನಡೆಸುತ್ತಿದ್ದು, ಇನ್ನಷ್ಟೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಬೇಕಾಗಿದೆ.

ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಬ್ಯಾಂಕ್‍ನ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇಲ್ಲಿನ ಗ್ರಾಹಕರಿಗೆ ಶಿವಮೊಗ್ಗ ಶಾಖೆಯಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ, ಎಂದಿನಂತೆ ಬ್ಯಾಂಕ್‍ನಲ್ಲಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. 

ಘಟನೆ ಹಿನ್ನೆಲೆ: ಬೆಳಗ್ಗೆ 8.30 ರ ಸುಮಾರಿಗೆ ಬ್ಯಾಂಕ್‍ನಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಸ್ವಚ್ಚತಾ ಕಾರ್ಯ ನಡೆಸುವ ಸಿಬ್ಬಂದಿಯು ಬ್ಯಾಂಕ್‍ಗೆ ಆಗಮಿಸಿ ವಿದ್ಯುತ್ ದೀಪದ ಸ್ವಿಚ್ ಆನ್ ಮಾಡಿದಾಗ, ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿಯೇ ಈ ಬೆಂಕಿ ಬ್ಯಾಂಕ್‍ನ್ನು ಆವರಿಸಿ ಧಗಧನೆ ಹೊತ್ತಿ ಉರಿಯಲಾರಂಭಿಸಿದೆ ಎಂದು ಹೇಳಲಾಗಿದೆ. 

ತಕ್ಷಣವೇ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಟ್ಟಡಕ್ಕೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿ, ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. 

ಜನ ದಟ್ಟಣೆ: ಬ್ಯಾಂಕ್‍ಗೆ ಬೆಂಕಿ ಬಿದ್ದ ವಿಷಯವು ಕಾಳ್ಗಿಚ್ಚಿನಂತೆ ಹರಡಿ, ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಇದರಿಂದ ರಸ್ತೆಯಲ್ಲಿ ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗುವಂತಾಗಿತ್ತು. ಬ್ಯಾಂಕ್‍ಗೆ ಬೆಂಕಿ ಹೊತ್ತಿಕೊಂಡ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಗಣಗಳಲ್ಲಿ ವೈರಲ್ ಆಗಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News