ನಿರ್ಮಾಣ ಹಂತದಲ್ಲಿರುವ ವಿಮಾನ ವಾಹಕ ನೌಕೆಯಿಂದ ಕಂಪ್ಯೂಟರ್ ಹಾರ್ಡ್‌ವೇರ್‌ಗಳು ನಾಪತ್ತೆ: ತನಿಖೆ ಆರಂಭ

Update: 2019-09-18 15:37 GMT

ಕೊಚ್ಚಿ,ಸೆ.18: ಶಂಕಿತ ಕಳ್ಳತನ ಪ್ರಕರಣದಲ್ಲಿ,ಇಲ್ಲಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿ.(ಸಿಎಸ್‌ಎಲ್)ನಲ್ಲಿ ದೇಶೀಯವಾಗಿ ನಿರ್ಮಾಣಗೊಳ್ಳುತ್ತಿರುವ ಭಾರತದ ಮೊದಲ ವಿಮಾನ ವಾಹಕ ನೌಕೆಯಿಂದ ಕೆಲವು ಕಂಪ್ಯೂಟರ್ ಹಾರ್ಡ್‌ವೇರ್‌ಗಳು ನಾಪತ್ತೆಯಾಗಿದ್ದು,ನಗರ ಪೊಲೀಸ್ ಆಯುಕ್ತರ ಉಸ್ತುವಾರಿಯಡಿ ವಿಶೇಷ ತನಿಖಾ ತಂಡ (ಸಿಟ್)ವು ಈ ಬಗ್ಗೆ ತನಿಖೆಯನ್ನು ಆರಂಭಿಸಿದೆ ಎಂದು ಪೊಲೀಸರು ಬುಧವಾರ ಇಲ್ಲಿ ತಿಳಿಸಿದರು.

ಪ್ರತಿಷ್ಠಿತ ವಿಮಾನ ವಾಹಕ ನೌಕೆಯು ನಿರ್ಮಾಣವಾಗುತ್ತಿರುವ ಸಿಎಸ್‌ಎಲ್‌ನ ಬಿಗು ಭದ್ರತಾ ವಲಯದಲ್ಲಿ ಈ ಘಟನೆ ನಡೆದಿದೆ.

ಹಾರ್ಡ್‌ವೇರ್‌ಗಳು ನೌಕೆಯಿಂದ ನಾಪತ್ತೆಯಾಗಿದ್ದರೂ,ಅವು ನೌಕೆಯ ಉಪಕರಣದ ಭಾಗಗಳಾಗಿರಲಿಲ್ಲ. ಆದರೂ ಬಿಗು ಭದ್ರತಾ ವಲಯದಲ್ಲಿ ನಡೆದಿರುವ ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಎಸಿಪಿ ಕ್ರೈಂ ಬ್ರಾಂಚ್ ನೇತೃತ್ವದಲ್ಲಿ ಸಿಟ್ ರಚಿಸಲಾಗಿದ್ದು,ಕೊಚ್ಚಿ ಪೊಲೀಸ್ ಆಯುಕ್ತ ವಿಜಯ ಸಾಖರೆ ಅವರು ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಘಟನೆಯ ಕುರಿತಂತೆ ಸಿಎಸ್‌ಎಲ್ ಅಧಿಕಾರಿಗಳು ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಳ್ಳತನ ನಡೆದ ದಿನಾಂಕ ಮತ್ತು ಸಮಯದ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿಯಿಲ್ಲ. ಸಿಎಸ್‌ಎಲ್ ಈವರೆಗೂ ಘಟನೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಈ ಬಗ್ಗೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರಕ್ಷಣಾ ವಕ್ತಾರರು,ಈ ವಿಷಯವು ನೌಕಾಪಡೆಯ ವ್ಯಾಪ್ತಿಯಲ್ಲಿಲ್ಲ ಎಂದರು.

ನಿಯಂತ್ರಣ ವ್ಯವಸ್ಥೆಗಳ ಅಂತಿಮ ಪರೀಕ್ಷಾ ಹಂತದಲ್ಲಿರುವ ಸ್ವದೇಶಿ ನಿರ್ಮಿತ ಈ ವಿಮಾನ ವಾಹಕ ನೌಕೆಯು 2020ರಲ್ಲಿ ಪ್ರಾಯೋಗಿಕವಾಗಿ ಕಡಲಿಗಿಳಿಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News