ಹಿಂದಿ ಹೇರಿಕೆ ಹಿಂದೆ ಬಿಜೆಪಿ, ಆರೆಸ್ಸೆಸ್ ಪಿತೂರಿ: ವಾಟಾಳ್ ನಾಗರಾಜ್ ಆರೋಪ

Update: 2019-09-18 09:17 GMT

ಮೈಸೂರು, ಸೆ.18: ಹಿಂದಿ ಭಾಷೆ ಹೇರುವುದರ ಹಿಂದೆ ಬಿಜೆಪಿ, ಆರೆಸ್ಸೆಸ್ ಮತ್ತು ಸಂಘ ಪರವಾರದ ಪಿತೂರಿ ಅಡಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ರೈಲ್ವೆ ನಿಲ್ದಾಣ ಬಳಿ ಬುಧವಾರ 'ಮೈಸೂರು ಪಾಕ್ ಕರ್ನಾಟಕದ್ದು, ಮೈಸೂರಿನದು’ ಎಂದು ಹೇಳುವ ಮೂಲಕ ಸಾರ್ವಜನಿಕರಿಗೆ ಮೈಸೂರು ಪಾಕ್ ಹಂಚಿ ತಮಿಳುನಾಡು ವಿರುದ್ಧ ಪ್ರತಿಭಟನೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಿಂದಿ ಹೇರಿಕೆ ಹಿಂದೆ ಆರೆಸ್ಸೆಸ್ ಕೈವಾಡ ಅಡಗಿದೆ. ಒಂದೇ ಭಾಷೆ, ಒಂದೇ ಪಕ್ಷ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದರ ಹಿಂದೆ ಸಾಕಷ್ಟು ವ್ಯವಸ್ಥಿತ ಸಂಚು ಅಡಗಿದೆ. ಇದರ ಬಗ್ಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಅಮಿತ್ ಶಾ ಮತ್ತು ಮೋದಿ ದೇಶವನ್ನು ತಮ್ಮ ಕೈಯಲ್ಲಿಟ್ಟುಕೊಳ್ಳುವ ಕನಸು ಕಂಡಿದ್ದಾರೆ. ಅದು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿ ಅವರೇ ಹಿಂದಿಯನ್ನು ವಿರೋಧಿಸಿ ದೇಶದ ಎಲ್ಲಾ ರಾಜ್ಯಗಳು ಹೊಂದಿಕೊಳ್ಳುವಂತ ಭಾಷೆ ಇರಲಿ ಎಂದಿದ್ದರು. ಅಂತಹದರಲ್ಲಿ ಮೋದಿ, ಅಮಿತ್ ಶಾ ಹಿಂದಿ ಹೇರಲು ಸಂಚು ರೂಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ, ಅಮಿತ್ ಶಾ ಮುಂದೊಂದು ದಿನ ನೋಟಿನ ಮೇಲಿರುವ ಗಾಂಧಿ ಚಿತ್ರವನ್ನು ತೆಗೆಯಬಹುದು ಎಚ್ಚರ  ಎಂದು ವಾಟಾಳ್ ನಾಗರಾಜ್ ಹೇಳಿದರು.

ಮೈಸೂರು ಪಾಕ್ ನಮ್ಮದು: ತಮಿಳುನಾಡು ಪದೇಪದೆ ಕರ್ನಾಟಕದ ಮೇಲೆ ಕ್ಯಾತೆ ತೆಗೆಯುತ್ತಿದೆ. ಕಾವೇರಿ ವಿಚಾರವಾಗಿ ನಂತರ ಮೇಕೆದಾಟು ಈಗ ಮೈಸೂರು ಪಾಕ್ ವಿಚಾರವಾಗಿ ತಗಾದೆ ತೆಗೆಯುತ್ತಿದೆ. ಮೈಸೂರು ಪಾಕ್ ಕರ್ನಾಟಕದ್ದು ಅಲ್ಲದೆ, ಮೈಸೂರಿನದ್ದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News