ಜಮ್ಮು ಕಾಶ್ಮೀರ: 370 ವಿಧಿ ಜೊತೆ ಬೀಫ್ ಬ್ಯಾನ್ ಕೂಡ ರದ್ದು

Update: 2019-09-18 09:17 GMT

ಜಮ್ಮು,ಸೆ.18: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ವಿಧಿ 370 ಮತ್ತು 35 ಎ ಅನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ಕ್ರಮದ ಅನಿರೀಕ್ಷಿತ ಫಲಶ್ರುತಿಯಾಗಿ ರಾಜ್ಯದಲ್ಲಿ ಕಳೆದ 157 ವರ್ಷಗಳಿಂದಲೂ ಜಾರಿಯಲ್ಲಿದ್ದ ಬೀಫ್ ನಿಷೇಧ ಕೂಡ ರದ್ದಾಗಿದೆ ಎಂದು thewire.in ವರದಿ ಮಾಡಿದೆ.

2011ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆಯಲ್ಲೀ ಶೇ.68.3ರಷ್ಟು ಮುಸ್ಲಿಮರೇ ಆಗಿದ್ದರೂ 1862ರಿಂದಲೂ ಇಲ್ಲಿ ಬೀಫ್ ಅನ್ನು ನಿಷೇಧಿಸಲಾಗಿತ್ತು. ಜಮ್ಮು-ಕಾಶ್ಮೀರವು ತನ್ನ ವಿಶೇಷ ಸ್ಥಾನಮಾನದಿಂದಾಗಿ ರಣಬೀರ್ ದಂಡ ಸಂಹಿತೆ (ಆರ್‌ಪಿಸಿ)ಯಡಿ ಪ್ರತ್ಯೇಕ ನಿಯಮಗಳು ಮತ್ತು ಕಾನೂನುಗಳನ್ನು ಹೊಂದಿತ್ತು. ಕೆಲವನ್ನು ಹೊರತುಪಡಿಸಿದರೆ ಆರ್‌ಪಿಸಿಯು ಹೆಚ್ಚುಕಡಿಮೆ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಎಲ್ಲ ಕಲಮ್‌ಗಳನ್ನು ಒಳಗೊಂಡಿತ್ತು. ಆರ್‌ಪಿಸಿಯ ಕಲಂ 298 ಎ ಅಡಿ ಆಕಳು ಮತ್ತು ಅದೇ ವಂಶಕ್ಕೆ ಸೇರಿದ ಎತ್ತು ಅಥವಾ ಕೋಣದಂತಹ ಪ್ರಾಣಿಗಳ ಉದ್ದೇಶಪೂರ್ವಕ ವಧೆಯು 10 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾದ ಜಾಮೀನು ರಹಿತ ಅಪರಾಧವಾಗಿತ್ತು.

ಕಲಂ 298 ಬಿ ಅಡಿ ವಧೆ ಮಾಡಲಾದ ಇಂತಹ ಪ್ರಾಣಿಗಳ ಮಾಂಸವನ್ನು ಹೊಂದಿರುವುದು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧವಾಗಿದ್ದು, ಒಂದು ವರ್ಷದವರೆಗೆ ಜೈಲುಶಿಕ್ಷೆ ಮತ್ತು 500 ರೂ.ವರೆಗೆ ದಂಡವನ್ನು ವಿಧಿಸಬಹುದಾಗಿತ್ತು.

1862ರಲ್ಲಿ ಜಮ್ಮು-ಕಾಶ್ಮೀರದ ಡೋಗ್ರಾ ಅರಸೊತ್ತಿಗೆಯ ಮಹಾರಾಜ ರಣಬೀರ್ ಸಿಂಗ್ ಅವರು ಇಡೀ ರಾಜ್ಯದಲ್ಲಿ ಬೀಫ್ ನಿಷೇಧವನ್ನು ಹೇರುವ ನಿಯಮವನ್ನೊಳಗೊಂಡಿದ್ದ ಆರ್‌ಪಿಸಿಯನ್ನು ಜಾರಿಗೊಳಿಸಿದ್ದರು. ಆಗಿನಿಂದ ಈ 157 ವರ್ಷಗಳಲ್ಲಿ ರಾಜ್ಯದಲ್ಲಿಯ ಯಾವುದೇ ಸರಕಾರವು ನಿಷೇಧವನ್ನು ರದ್ದುಗೊಳಿಸಲು ಪ್ರಯತ್ನಿಸಿರಲಿಲ್ಲ. 2015ರಲ್ಲಿ ಬೀಫ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ವಿಲೇವಾರಿಗೊಳಿಸಿದ್ದ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ನಿರ್ದಿಷ್ಟ ಕಾನೂನೊಂದನ್ನು ರೂಪಿಸುವಂತೆ ಅಥವಾ ನಿರ್ದಿಷ್ಟ ರೀತಿಯಲ್ಲಿ ಕಾನೂನೊಂದನ್ನು ಜಾರಿಗೊಳಿಸುವಂತೆ ತಾನು ಸರಕಾರಕ್ಕೆ ನಿರ್ದೇಶ ನೀಡುವಂತಿಲ್ಲ ಎಂದು ಹೇಳಿತ್ತು.

ಈಗ ವಿಧಿ 370ನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರ ಪುನರ್ಘಟನೆ ಕಾಯ್ದೆಯನ್ನು ತಂದಿರುವುದರಿಂದ ಆರ್‌ಪಿಸಿ ರದ್ದುಗೊಂಡಿದೆ. ಐಪಿಸಿಯಲ್ಲಿ ಗೋಮಾಂಸವನ್ನು ಹೊಂದಿರುವುದನ್ನು ನಿಷೇಧಿಸುವ ಯಾವುದೇ ನಿಯಮಗಳಿಲ್ಲ. ವಿವಿಧ ರಾಜ್ಯಗಳು ಗೋಹತ್ಯೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಹೊಂದಿವೆಯಾದರೂ, ಬೀಫ್ ಸೇವನೆಯನ್ನು ಯಾವುದೇ ರಾಜ್ಯವು ಸ್ಪಷ್ಟವಾಗಿ ನಿಷೇಧಿಸಿಲ್ಲ. ಜಮ್ಮು-ಕಾಶ್ಮೀರವು ಜಾನುವಾರು ಹತ್ಯೆ ಮತ್ತು ಬೀಫ್ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿತ್ತು.

ಆರ್‌ಪಿಸಿಯ ಅನುಪಸ್ಥಿತಿಯಲ್ಲಿ ಬೀಫ್ ನಿಷೇಧವು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ. ಗೋಹತ್ಯೆ ಅಥವಾ ಗೋಮಾಂಸ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸುವ ಹಕ್ಕನ್ನು ರಾಜ್ಯ ಶಾಸಕಾಂಗಗಳು ಹೊಂದಿರುವುದರಿಂದ ಐಪಿಸಿಯಲ್ಲಿ ಅದಕ್ಕಾಗಿ ಯಾವುದೇ ನಿಯಮಗಳಿಲ್ಲ. ಕೇಂದ್ರವು ಈ ಬಗ್ಗೆ ಯೋಚಿಸಬೇಕಿದೆ ಎಂದು ಜಮ್ಮುವಿನ ಹೈಕೋರ್ಟ್ ಬಾರ್ ಅಸೋಷಿಯೇಷನ್‌ನ ಅಧ್ಯಕ್ಷ ಅಭಿನವ ಶರ್ಮಾ ಹೇಳಿದರು.

ಈವರೆಗೆ ಯಾವುದೂ ಸ್ಪಷ್ಟವಾಗಿಲ್ಲ ಮತ್ತು ನೂತನ ನಿಯಮಗಳೇನು ಎನ್ನುವುದನ್ನು ನಿರ್ಧರಿಸಲು ಅ.31ರವರೆಗೆ ನಾವು ಕಾಯಬೇಕಿದೆ. ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ದೀರ್ಘಕಾಲ ಇರುವುದೇ ಎನ್ನುವುದೂ ನಮಗೆ ತಿಳಿದಿಲ್ಲ. ಅಲ್ಲದೆ ಕಸಾಯಿಖಾನೆಗಳ ಸ್ಥಾಪನೆಗೆ ಸ್ಥಾಪಿತ ವಿಧಿವಿಧಾನಗಳಿವೆ ಮತ್ತು ಮಹಾನಗರ ಪಾಲಿಕೆಯು ಅದಕ್ಕೆ ಪರವಾನಿಗೆ ನೀಡುತ್ತದೆ. ಮಾಂಸ ಮಾರಾಟಕ್ಕೆ ಸ್ಪಷ್ಟವಾದ ನಿಯಮಗಳು ಅಥವಾ ಪರವಾನಿಗೆ ಇಲ್ಲ ಎಂದು ಜಮ್ಮುವಿನ ಉಪಮೇಯರ್ ಪೂರ್ಣಿಮಾ ಶರ್ಮಾ ಹೇಳಿದರು.

ನಾವು ಚಿಕನ್ ಮತ್ತು ಮಟನ್ ಅನ್ನು ಮಾತ್ರ ಮಾರಾಟ ಮಾಡುತ್ತೇವೆ. ರಾಜ್ಯದಲ್ಲಿ ಬೀಫ್ ನಿಷೇಧ ದೀರ್ಘ ಸಮಯದಿಂದ ಜಾರಿಯಲ್ಲಿದ್ದರಿಂದ ಯಾವುದೇ ವ್ಯಾಪಾರಿ ಬೀಫ್ ಮಾರಾಟಕ್ಕೆ ಮುಂದಾಗುತ್ತಾನೆ ಎಂದು ನಾನು ಭಾವಿಸಿಲ್ಲ. ಅದು ಭಾವನಾತ್ಮಕ ವಿಷಯವೂ ಆಗಿದೆ ಮತ್ತು ನಾವದನ್ನು ಗೌರವಿಸುತ್ತೇವೆ ಎಂದು ನಗರದಲ್ಲಿಯ ಮಾಂಸ ವ್ಯಾಪಾರಿ ಚೌಧರಿ ಅಮಾನತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News