ಯಾವುದೇ ದೇಶ ತನ್ನ ಜನರನ್ನು ಸಾಯಲು ‘ಗ್ಯಾಸ್ ಚೇಂಬರ್’ಗೆ ಕಳುಹಿಸುವುದಿಲ್ಲ

Update: 2019-09-18 12:03 GMT

ಹೊಸದಿಲ್ಲಿ, ಸೆ. 18: ಭಾರತದಲ್ಲಿ ಮಲಗುಂಡಿ ಹಾಗೂ ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭ ಕಾರ್ಮಿಕರು ಸಾವನ್ನಪ್ಪುತ್ತಿರುವ ಬಗ್ಗೆ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಪ್ರಪಂಚದ ಯಾವುದೇ ದೇಶ ತನ್ನ ಜನರನ್ನು ಸಾಯಲು ‘ಗ್ಯಾಸ್ ಚೇಂಬರ್’ (ವಿಷಾನಿಲದ ಕೋಣೆ)ಗೆ ಕಳುಹಿಸುವುದಿಲ್ಲ ಎಂದು ಹೇಳಿದೆ.

ಸ್ವಾತಂತ್ರ್ಯ ದೊರಕಿ 70 ವರ್ಷ ಕಳೆದರೂ ದೇಶದಲ್ಲಿ ಜಾತಿ ತಾರತಮ್ಯ ಈಗಲೂ ಮುಂದುವರಿದಿರುವುದು ಆಘಾತಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಲಗುಂಡಿ ಹಾಗೂ ಚರಂಡಿ ಅಥವಾ ಮ್ಯಾನ್‌ಹೋಲ್ ಸ್ವಚ್ಛತೆಯಲ್ಲಿ ತೊಡಗುವ ಕಾರ್ಮಿಕರಿಗೆ ಮುಖವಾಡ, ಆಮ್ಲಜನಕದ ಸಿಲಿಂಡರ್‌ನಂತಹ ಸೂಕ್ತ ರಕ್ಷಣಾ ಸಾಧನಗಳನ್ನು ಯಾಕೆ ಒದಗಿಸಲಾಗುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರನ್ನು ಪ್ರಶ್ನಿಸಿತು. ‘‘ನೀವು ಅವರಿಗೆ ಮುಖವಾಡ ಹಾಗೂ ಆಮ್ಲಜನಕ ಸಿಲಿಂಡರ್‌ಗಳನ್ನು ಯಾಕೆ ಒದಗಿಸುತ್ತಿಲ್ಲ ? ಜಗತ್ತಿನಲ್ಲಿ ಯಾವ ದೇಶ ಕೂಡ ತನ್ನ ಜನರನ್ನು ಸಾಯಲು ಗ್ಯಾಸ್ ಚೇಂಬರ್‌ಗೆ ಕಳುಹಿಸುತ್ತಿಲ್ಲ. ಇದರಿಂದಾಗಿ ಪ್ರತಿ ತಿಂಗಳು ಮೂರರಿಂದ ನಾಲ್ಕು ಮಂದಿ ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ’’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾಹ್ ಹಾಗೂ ಬಿ.ಆರ್. ಗವಾಯಿ ಅವರನ್ನು ಕೂಡ ಒಳಗೊಂಡ ಪೀಠ ಹೇಳಿತು.

ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಆದರೆ, ಈ ಕಾರ್ಮಿಕರಿಗೆ ಆಡಳಿತ ಸಮಾನ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಪೀಠ ತಿಳಿಸಿತು. ದೇಶದಾದ್ಯಂತ ಸ್ವಚ್ಚತಾ ಕಾರ್ಮಿಕರಿಗೆ ಯಾವುದೇ ರಕ್ಷಣಾ ಸಾಧನಗಳನ್ನು ಒದಗಿಸದೇ ಇರುವುದು ಹಾಗೂ ಮಲಗುಂಡಿ ಹಾಗೂ ಒಳಚರಂಡಿ ಅಥವಾ ಮ್ಯಾನ್‌ಹೋಲ್‌ಗಳನ್ನು ಸ್ವಚ್ಚಗೊಳಿಸುವ ಸಂದರ್ಭ ಕಾರ್ಮಿಕರು ಸಾವನ್ನಪ್ಪುತ್ತಿರುವುದನ್ನು ‘ಅಮಾನವೀಯ’ ಎಂದು ಪೀಠ ಹೇಳಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ ಅಡಿಯಲ್ಲಿ ಬಂಧನದ ನಿಬಂಧನೆಗಳನ್ನು ವಸ್ತುಶಃ ದುರ್ಬಲಗೊಳಿಸಿದ ತನ್ನ ಕಳೆದ ವರ್ಷದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಕೇಂದ್ರದ ಮನವಿಯ ವಿಚಾರಣೆ ನಡೆಸಿದ ಸಂದರ್ಭ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘‘ದೇಶದಲ್ಲಿ ಅಶ್ಪಶತೆಯನ್ನು ಸಂವಿಧಾನ ನಿಷೇಧಿಸಿದ ಹೊರತಾಗಿಯೂ ನೀವು ಇದಕ್ಕೆ ಕೈಜೋಡಿಸುತ್ತೀರಾ ? ಎಂದು ನಾನು ನಿಮ್ಮಲ್ಲಿ ಪ್ರಶ್ನಿಸುತ್ತೇನೆ. ಇಲ್ಲ ಎಂಬುದು ಇದಕ್ಕೆ ಉತ್ತರ. ನೀವು ಮಾಡುತ್ತಿರುವ ರೀತಿ ಇದು. ಈ ಪರಿಸ್ಥಿತಿ ಸುಧಾರಿಸಬೇಕು. ನಾವು ಸ್ವಾತಂತ್ರ್ಯ ಪಡೆದುಕೊಂಡು 70 ವರ್ಷಗಳಾಗಿವೆ. ಆದರೆ, ಇಂತಹ ಘಟನೆಗಳು ಈಗಲೂ ಸಂಭವಿಸುತ್ತಿದೆ’’

ಅರುಣ್ ಮಿಶ್ರಾ, ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News