ಸೆ.24 ರಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ, ಬೆಳಗಾವಿಗೆ ಪಾದಯಾತ್ರೆ

Update: 2019-09-18 12:23 GMT

►ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು, ಸೆ.18: ನೆರೆ ಸಂತ್ರಸ್ತರಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಸೆ.24ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. 

ಬುಧವಾರ ಕೆಪಿಸಿಸಿ ಕಚೇರಯಲ್ಲಿ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ನೆರೆ ಸಂತ್ರಸ್ತರ ಬಗ್ಗೆ ಬಿಜೆಪಿ ನಾಯಕರು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹೀಗಾಗಿ ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿಯವರೆಗೆ ಪಾದಯಾತ್ರೆ ಮಾಡುವ ಮೂಲಕ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಬೇಕಿದೆ ಎಂದು ಕಾಂಗ್ರೆಸ್ ಶಾಸಕರು ಒಕ್ಕೊರಲಿನಿಂದ ನಾಯಕರಿಗೆ ಮನವಿ ಮಾಡಿದ್ದಾರೆ.

ಬಿಜೆಪಿ ಸರಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಅನರ್ಹಗೊಂಡಿರುವ ಶಾಸಕರ ಹಾಗೂ ಬಿಜೆಪಿ ಶಾಸಕರ ಪ್ರತಿ ಕ್ಷೇತ್ರಗಳಿಗೆ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ನಮ್ಮ ಕ್ಷೇತ್ರಗಳಿಗೆ ಕೇವಲ 50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಸರಕಾರದ ಇಂತಹ ಸ್ವಾರ್ಥ ರಾಜಕಾರಣವನ್ನು ಜನತೆಗೆ ತಿಳಿಸಬೇಕಿದೆ ಎಂದು ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಸಭೆಯ ಬಳಿಕ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನೆರೆ ಸಂತ್ರಸ್ತರ ಪರಿಹಾರ ಕಾರ್ಯ ಯಾವ ತಾಲೂಕಿನಲ್ಲೂ ಸಮರ್ಪಕವಾಗಿ ನಡೆದಿಲ್ಲ. ಇಲ್ಲಿಯವರೆಗೂ ಕೇಂದ್ರ ಸರಕಾರದಿಂದ ಒಂದು ರೂ. ಬಿಡುಗಡೆಯಾಗಿಲ್ಲ. ಇದರಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ ಜನತೆ ಧಿಕ್ಕು ತೋಚದಂತಾಗಿದ್ದಾರೆ ಎಂದು ವಿಷಾದಿಸಿದರು.

ಹೈ-ಕರ್ನಾಟಕ, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ 124 ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿವೆ. ಗಂಜಿ ಕೇಂದ್ರಗಳನ್ನು ಮುಚ್ಚಿದ್ದಾರೆ. ತಾತ್ಕಾಲಿಕವಾಗಿ ಶೆಡ್ ಹಾಕಿಲ್ಲ. ನೀರು ನಿಂತ ಮನೆಗಳಿಗೆ ಮಾತ್ರ 10 ಸಾವಿರ ರೂ.ಕೊಟ್ಟಿದ್ದಾರೆ. ಉಳಿದಂತೆ ಯಾವ ಪರಿಹಾರ ಕಾರ್ಯವೂ ಇಲ್ಲಿಯವರೆಗೂ ನಡೆದಿಲ್ಲವೆಂದು ಅವರು ಖಂಡಿಸಿದರು.

ಹಲವು ಗ್ರಾಮಗಳ ಜನತೆ ಇಂದಿಗೂ ನೀರಿನಲ್ಲೇ ನಿಲ್ಲಬೇಕಾದ ಪರಿಸ್ಥಿತಿಯಿದೆ. ಈ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಿತ್ತು. ಆದರೆ, ಇದ್ಯಾವುದರ ಬಗೆಗೂ ಗಮನ ಹರಿಸುತ್ತಿಲ್ಲ. ರಾಜ್ಯ ಬಿಜೆಪಿ 25 ಸಂಸದರನ್ನು ಕೇಂದ್ರಕ್ಕೆ ಆಯ್ಕೆ ಮಾಡಿ ಕಳುಹಿಸಿದೆ. ಆದರೆ, ಅವರ್ಯಾರು ನೆರೆ ಸಂತ್ರಸ್ತರ ಬಗ್ಗೆ ಬಾಯಿ ಬಿಡುತ್ತಿಲ್ಲ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಶಾಸಕ ತನ್ವೀರ್ ಸೇಠ್, ಎಚ್.ಕೆ.ಪಾಟೀಲ್, ರಮೇಶ್‌ ಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಅಜಯ ಸಿಂಗ್, ಕುಸುಮಾ ಶಿವಳ್ಳಿ, ಫಾತಿಮಾ, ನಂಜೇಗೌಡ, ರಾಘವೇಂದ್ರ ಹಿತ್ನಾಳ್, ಡಾ.ಜಯಮಾಲಾ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

ನಿರ್ಣಯಗಳು:

-ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಲು ಕಾಂಗ್ರೆಸ್ ವತಿಯಿಂದ ಪ್ರದೇಶವಾರು ಆಂದೋಲನ.

-ರೈತ ಸಮುದಾಯ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳ ಸಾಲಗಳನ್ನು ಮನ್ನಾ ಮಾಡಬೇಕು.

-ಪ್ರವಾಹ ಮತ್ತು ಬರ ಪರಿಸ್ಥಿತಿಯ ಚರ್ಚೆಗೆ ಕೂಡಲೇ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನವನ್ನು ಕರೆಯಬೇಕು.

-ಬರ ಪೀಡಿತ ತಾಲೂಕು, ಪ್ರದೇಶವೆಂದು ಘೋಷಿಸಬೇಕು.

-ಪ್ರವಾಹದಲ್ಲಿ ಮೃತಪಟ್ಟ ಜನರಿಗೆ ಸಂತಾಪ ಸೂಚಿಸಲಾಯಿತು.

-ಪಕ್ಷದ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ವಿರುದ್ಧ ದ್ವೇಷ ರಾಜಕಾರಣ ಸಾಧಿಸುತ್ತಿರುವ ಬಿಜೆಪಿಯ ನಿಲುವನ್ನು ತೀವ್ರವಾಗಿ ಖಂಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News