ಅಕ್ಟೋಬರ್ 3ರ ತನಕ ಚಿದಂಬರಂಗೆ ತಿಹಾರ್ ಜೈಲೇ ಗತಿ

Update: 2019-09-19 14:21 GMT

ಹೊಸದಿಲ್ಲಿ,ಸೆ.19: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅ.3ರವರೆಗೆ ವಿಸ್ತರಿಸಿ ಇಲ್ಲಿಯ ವಿಶೇಷ ನ್ಯಾಯಾಲಯವು ಗುರುವಾರ ಆದೇಶಿಸಿದೆ.

ವಿಶೇಷ ನ್ಯಾಯಾಧೀಶ ಅಜಯ ಕುಮಾರ ಕುಹರ್ ಅವರು ಚಿದಂಬರಂ ಅವರ ವೈದ್ಯಕೀಯ ತಪಾಸಣೆಗೂ ಅನುಮತಿ ನೀಡಿದರು.

ಚಿದಂಬರಂ ಅವರ ನ್ಯಾಯಾಂಗ ಕಸ್ಟಡಿ ವಿಸ್ತರಣೆಯನ್ನು ಕೋರಿದ ಸಿಬಿಐ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ,ಅವರನ್ನು ಜೈಲಿಗೆ ಕಳುಹಿಸಿದಾಗಿನಿಂದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ತಿಳಿಸಿದರು.

ನ್ಯಾಯಾಂಗ ತನಿಖೆ ವಿಸ್ತರಣೆಗೆ ಸಿಬಿಐ ಕೋರಿಕೆಯನ್ನು ವಿರೋಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು,ತಿಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದ ಅವಧಿಯಲ್ಲಿ ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಸಾಕಷ್ಟು ಪೂರಕ ಆಹಾರಕ್ಕಾಗಿ ಚಿದಂಬರಂ ಅವರ ಪರವಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದರು.

ಚಿದಂಬರಂ ಅವರಿಗೆ ಜೈಲಿನ ಕೋಣೆಯ ಹೊರಗಡೆ ಕುರ್ಚಿಯೊಂದನ್ನು ಒದಗಿಸಲಾಗಿತ್ತು ಮತ್ತು ಈಗ ಅದನ್ನು ತೆಗೆಯಲಾಗಿದೆ. ಅವರೀಗ ಹಾಸಿಗೆಯ ಮೇಲೆ ಮಾತ್ರ ಕುಳಿತುಕೊಳ್ಳುವಂತಾಗಿದೆ. ಅವರಿಗೆ ತಲೆದಿಂಬನ್ನೂ ನೀಡಲಾಗಿಲ್ಲ ಎಂದು ಅವರ ಪರ ಇನ್ನೋರ್ವ ಹಿರಿಯ ವಕೀಲ ಎ.ಎಂ.ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ಏಮ್ಸ್‌ನಲ್ಲಿ ಚಿದಂಬರಂ ಅವರ ವೈದ್ಯಕೀಯ ತಪಾಸಣೆಗಾಗಿ ಸಿಬಲ್ ಕೋರಿಕೊಂಡಾಗ,ಜೈಲಿನಲ್ಲಿರುವ ಯಾವುದೇ ವ್ಯಕ್ತಿಯ ಆರೋಗ್ಯವು ಕಾಳಜಿಯ ವಿಷಯವಾಗಿದೆ. ಕಾನೂನಿನಲ್ಲಿ ಅವಕಾಶವಿರುವುದನ್ನು ಜೈಲಿನ ಅಧಿಕಾರಿಗಳು ಮಾಡುತ್ತಾರೆ ಎಂದು ಮೆಹ್ತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News