ಪ್ರಧಾನಿ ಭೇಟಿಗೆ ಸಿಎಂಗೆ ಅವಕಾಶ ನೀಡದಿರುವುದು ಯಡಿಯೂರಪ್ಪರಿಗೆ ಅವಮಾನ: ಸಿದ್ದರಾಮಯ್ಯ

Update: 2019-09-19 11:50 GMT

ಬೆಂಗಳೂರು, ಸೆ. 19: ‘ಅತಿವೃಷ್ಟಿಯಂತಹ ತುರ್ತು ಸ್ಥಿತಿಯಲ್ಲಿ ಪ್ರಧಾನಿ ಮೋದಿ ರಾಜ್ಯದ ಮುಖ್ಯಮಂತ್ರಿಗೆ ಸಂದರ್ಶನ ನಿರಾಕರಿಸುತ್ತಿರುವುದು ಯಡಿಯೂರಪ್ಪ ಅವರಿಗೆ ಅವಮಾನವಾದರೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸರು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನೆರೆ ಸಂತ್ರಸ್ತರಿಗೆ ಪರಿಹಾರ ಕೋರಿ ಪ್ರಧಾನಿ ಮೋದಿ ಭೇಟಿಗೆ ಸಿಎಂ ಯಡಿಯೂರಪ್ಪ ಸಮಯ ಕೋರಿದ್ದರು. ಆದರೆ, ಸಿಎಂಗೆ ಪ್ರಧಾನಮಂತ್ರಿ ಕಚೇರಿಯಿಂದ ಸಮಯ ನೀಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅತಿವೃಷ್ಟಿಯಿಂದ ಆಗಿರುವ ನಷ್ಟ 35,160 ಕೋಟಿ ರೂ.ಎಂದು ಅಂದಾಜು ಮಾಡಿರುವ ರಾಜ್ಯ ಸರಕಾರ, ಪರಿಹಾರಕ್ಕಾಗಿ ಕೇವಲ 1500 ಕೋಟಿ ರೂ.ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿರುವ ಘೋರ ಅನ್ಯಾಯ. ಸಿಎಂ ಬಿಎಸ್‌ವೈ ಅವರೇ ಸರಕಾರ ದಿವಾಳಿಯಾಗಿದೆಯೇ?’ ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ರಾಜಸ್ಥಾನದಲ್ಲಿ ಆರು ಜನ ಬಿಎಸ್ಪಿ ಶಾಸಕರು ತಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದನ್ನು ನಿಮ್ಮ ಪ್ರಕಾರ ‘ಆಪರೇಷನ್ ನೀಚ ಹಸ್ತ’ ಎಂದು ಕರೆಯಬೇಕು. ರಾಜಸ್ಥಾನದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ವಿರುದ್ಧ ನೀವು ಪ್ರತಿಭಟನೆ ಕೂರಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಟೀಕಿಸಬೇಕು’

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ(ಟ್ವೀಟ್)

‘ಸಿ.ಟಿ.ರವಿಯವರೇ, ರಾಜಸ್ಥಾನದ ಪಕ್ಷಾಂತರದ ಬಗ್ಗೆ ಅಲ್ಲಿಯ ಜನ ಮತ್ತು ಪಕ್ಷಗಳು ನೋಡಿಕೊಳ್ತಾರೆ. ನಮ್ಮ ರಾಜ್ಯಕ್ಕೆ ಪ್ರಧಾನಿ ಮಾಡುತ್ತಿರುವ ಅನ್ಯಾಯಕ್ಕೆ ಅವರ ಕಚೇರಿ ಮುಂದೆ ನೀವು ಯಾವಾಗ ಧರಣಿ ನಡೆಸ್ತೀರಿ? ನಿಮಗೆ ಜೊತೆ ನೀಡಲು ನಾನೂ ಬರ್ತೇನೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

‘ರಾಜ್ಯ ಭೀಕರ ಪ್ರವಾಹಕ್ಕೆ ಸಿಲುಕಿ ತತ್ತರಿಸಿದರೂ ಸಹ ಯಾವುದೇ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದ ನರೇಂದ್ರ ಮೋದಿಯಂತಹ ಬೇಜವಾಬ್ದಾರಿ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿಲ್ಲ. ಸ್ವಪಕ್ಷದ ಪ್ರಧಾನಿಯನ್ನು ಭೇಟಿಯಾಗಲು ಹೆಣಗಾಡುತ್ತಿರುವ ಯಡಿಯೂರಪ್ಪನವರಷ್ಟು ದುರ್ಬಲ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ಕಂಡಿಲ್ಲ’

-ಜೆಡಿಎಸ್ ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News