ದುಬೈನಿಂದ ವ್ಯಾಟ್ಸಾಪ್ ಸಂದೇಶದ ಮೂಲಕ ಪತ್ನಿಗೆ ತಲಾಖ್: ದೂರು ದಾಖಲು

Update: 2019-09-19 12:06 GMT

ಶಿವಮೊಗ್ಗ, ಸೆ. 19: ಉದ್ಯೋಗ ನಿಮಿತ್ತ ದುಬೈನಲ್ಲಿ ನೆಲೆಸಿರುವ ವ್ಯಕ್ತಿಯೋರ್ವರು, ಸಾಮಾಜಿಕ ಜಾಲತಾಣ ವ್ಯಾಟ್ಸಾಪ್ ಸಂದೇಶದ ಮೂಲಕ ಶಿವಮೊಗ್ಗದಲ್ಲಿರುವ ಪತ್ನಿಗೆ ತಲಾಖ್ ಹೇಳಿದ್ದಾರೆಂದು ಆರೋಪಿಸಲಾಗಿದ್ದು, ಈ ಸಂಬಂಧ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಪತ್ನಿ ದೂರು ದಾಖಲಿಸಿದ ಘಟನೆ ನಡೆದಿದೆ. 

ಟ್ಯಾಂಕ್‍ ಮೊಹಲ್ಲಾದ ಮುಸ್ತಫಾ ಬೇಗ್ ವ್ಯಾಟ್ಸಾಪ್ ಮೂಲಕ ಪತ್ನಿಗೆ ತಲಾಖ್ ಹೇಳಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೇಂದ್ರ ಸರ್ಕಾರ ತ್ರಿವಳಿ ತಲಾಖ್‍ಗೆ ಸಂಬಂಧಿಸಿದ ಕಾನೂನು ಜಾರಿಗೊಂಡ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. 

ಘಟನೆ ಹಿನ್ನೆಲೆ: ಮುಸ್ತಫಾ ಬೇಗ್‍ರವರು ಕಳೆದ 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಓರ್ವ ಮಗಳಿದ್ದಾಳೆ. ಮುಸ್ತಾಫರವರು ಸಿಸಿಟಿವಿ ಟೆಕ್ನಿಷಿಯನ್ ಕೆಲಸಕ್ಕೆ ಸೇರಿ, ದುಬೈಗೆ ತೆರಳಿದ್ದರು. ವರ್ಷಕ್ಕೆ ಎರಡು ಬಾರಿ ಶಿವಮೊಗ್ಗಕ್ಕೆ ಬಂದು ಹೋಗುತ್ತಿದ್ದರು. 

ಈ ವರ್ಷ ಜನವರಿಗೆ ದುಬೈಗೆ ತೆರಳಿದ್ದ ಅವರು, ಕೆಲವು ದಿನಗಳ ಹಿಂದೆ ಪತ್ನಿಯ ಮೊಬೈಲ್‍ಗೆ ವ್ಯಾಟ್ಸಾಪ್ ಮೂಲಕ ಮೂರು ಬಾರಿ ತಲಾಖ್ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪತಿಯ ವಿರುದ್ಧ ಮಹಿಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಆದರೆ ಬುಧವಾರ ಅಧಿಕೃತವಾಗಿ ದೂರು ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News