ವಿಕ್ರಮ್ ಲ್ಯಾಂಡರ್‌ನೊಂದಿಗೆ ಸಂಪರ್ಕಕ್ಕೆ ಇಸ್ರೋ ಅಂತಿಮ ಪ್ರಯತ್ನ

Update: 2019-09-20 15:29 GMT

ಹೊಸದಿಲ್ಲಿ, ಸೆ.20: ಸೆ.21ರಿಂದ ಚಂದ್ರನಲ್ಲಿ ರಾತ್ರಿಯ ಅವಧಿ ಆರಂಭವಾಗಲಿದ್ದು, ಅದಕ್ಕೂ ಮೊದಲು ವಿಕ್ರಮ್ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ಅಂತಿಮ ಪ್ರಯತ್ನ ನಡೆಸುತ್ತಿದ್ದಾರೆ.

  ಚಂದ್ರನಲ್ಲಿ ಒಂದು ಹಗಲು ಅಥವಾ ರಾತ್ರಿ ಎಂದರೆ 14 ದಿನಗಳು. ಸೆ.21ರಿಂದ ಮುಂದಿನ 14 ದಿನ ಚಂದ್ರನಲ್ಲಿ ರಾತ್ರಿಯ ಅವಧಿ ಆರಂಭವಾಗುತ್ತದೆ. ಚಂದ್ರನಲ್ಲಿ ರಾತ್ರಿಯ ಅವಧಿ ಆರಂಭವಾಗುವ ಕಾರಣ ಸೋಲಾರ್ ಶಕ್ತಿಯಿಂದ ಕಾರ್ಯ ನಿರ್ವಹಿಸುವ ವಿಕ್ರಮ್ ಲ್ಯಾಂಡರ್‌ಗೆ ಅಗತ್ಯವಿರುವ ಇಂಧನ ಉತ್ಪಾದಿಸಲು ಆಗುವುದಿಲ್ಲ.

ಬಹುನಿರೀಕ್ಷಿತ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಸೆ.7ರಂದು ಭೂಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಅಂದಿನಿಂದ ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ನಿರಂತರ ಪ್ರಯತ್ನಿಸುತ್ತಿದ್ದಾರೆ. ತಜ್ಞರು ಮತ್ತು ಇಸ್ರೋ ಹಿರಿಯ ವಿಜ್ಞಾನಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಮಟ್ಟದ ಸಮಿತಿಯು ವಿಕ್ರಮ್ ಲ್ಯಾಂಡರ್‌ನ ಸಂಪರ್ಕ ತಪ್ಪಿಹೋಗಲು ಕಾರಣವೇನು ಎಂಬ ಬಗ್ಗೆ ವಿಶ್ಲೇಷಣೆ ನಡೆಸುತ್ತಿದೆ.

  ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ವಿಫಲ ಪ್ರಯತ್ನ ನಡೆಸಿದ ಪ್ರದೇಶದ ಚಿತ್ರಗಳನ್ನು ತನ್ನ ಎಲ್‌ಆರ್‌ಒ ಬಾಹ್ಯಾಕಾಶ ನೌಕೆ ಸೆರೆಹಿಡಿದಿರುವುದಾಗಿ ಸೆ.17ರಂದು ನಾಸಾ ತಿಳಿಸಿತ್ತು.

ಚಂದ್ರಯಾನ-2 ಯೋಜನೆ ಯಶಸ್ವಿಯಾಗಿದ್ದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಥಮ ಪ್ರಯತ್ನದಲ್ಲೇ ಲ್ಯಾಂಡರ್ ಅನ್ನು ಇಳಿಸಿದ ಪ್ರಥಮ ರಾಷ್ಟ್ರ ಎಂಬ ಹಿರಿಮೆಗೆ ಭಾರತ ಪಾತ್ರವಾಗುತ್ತಿತ್ತು. ಜೊತೆಗೆ ಚಂದ್ರನ ಮೇಲೆ ಶೋಧಕ ನೌಕೆಯನ್ನು ಯಶಸ್ವಿಯಾಗಿ ಕಳುಹಿಸಿದ ನಾಲ್ಕನೇ ದೇಶವಾಗಲಿತ್ತು. ಅಮೆರಿಕ, ರಶ್ಯ ಹಾಗೂ ಚೀನಾ ಈ ಸಾಧನೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News