ಪ್ರಸಕ್ತ ಸಾಲಿನಲ್ಲಿಯೇ ವೈದ್ಯಕೀಯ ಕಾಲೇಜು ಆರಂಭಿಸಲು ಪ್ರಯತ್ನ: ಸಚಿವ ಸಿ.ಟಿ.ರವಿ

Update: 2019-09-20 18:38 GMT

ಚಿಕ್ಕಮಗಳೂರು, ಸೆ.20: ಪ್ರಸಕ್ತ ಸಾಲಿನಲ್ಲಿಯೇ ನಗರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಅಗತ್ಯವಾಗಿರುವ ಎಲ್ಲ ರೀತಿಯ ಶ್ರಮ ಹಾಕುತ್ತಿದ್ದೇನೆ ಎಂದು ಪ್ರವಾಸ್ಯೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ವೈಜ್ಞಾನಿಕವಾದ ರಕ್ತ ಮಾದರಿ ಪರೀಕ್ಷಾ ಯಂತ್ರಗಳ ಉದ್ಘಾಟನೆ ಹಾಗೂ ವೈದ್ಯಕೀಯ ಕಾಲೇಜು ನಿರ್ಮಿಸುವ ನಗರ ಸಮೀಪದ ಕದ್ರಿಮಿದ್ರಿಯಲ್ಲಿ ಗುರುತಿಸಿರುವ ಸ್ಥಳಕ್ಕೆ ಉನ್ನತ ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಕಾಲೇಜು ಜಾಗದ ಪರಿಶೀಲನೆ ಮತ್ತು ಉದ್ದೇಶಿತ ಕಟ್ಟಡದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ವೈದ್ಯಕೀಯ ಕಾಲೇಜು ಸ್ಥಾಪನೆಯ ಜೊತೆಗೆ ಜಿಲ್ಲಾಸ್ಪತ್ರೆಯನ್ನು 750 ಹಾಸಿಗೆಗಳ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕದ್ರಿಮಿದ್ರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡಲು 35 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದ ಅವರು, ಕಾಲೇಜು ಕಟ್ಟಡದ ವಿನ್ಯಾಸ ರಚನೆ ಮತ್ತು ನಿರ್ಮಿಸುವ ತಜ್ಞರಿಂದ ಮಾಹಿತಿ ಪಡೆದು, ವೈಜ್ಞಾನಿಕವಾಗಿ ಹಾಗೂ ದೂರದೃಷ್ಟಿ ಇಟ್ಟುಕೊಂಡು ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಯನ್ನು ಶೀಘ್ರ ಸಿದ್ಧಪಡಿಸಿ ತಕ್ಷಣ ಸಂಬಂಧಪಟ್ಟವರಿಗೆ ಸಲ್ಲಿಸಬೇಕೆಂದು ಸೂಚಿಸಿದರು. ಅಲ್ಲದೇ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ತಡ ಆದಲ್ಲಿ ತಾತ್ಕಾಲಿಕವಾಗಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಆರಂಭಿಸಲು ಯಾವುದಾದರೂ ಸರಕಾರಿ ಕಟ್ಟಡವನ್ನೂ ಪರಿಶೀಲಿಸಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಾಗಿ ಬದಲಾಯಿಸಲಾಗುವುದು. ಇಂದು ಲಭ್ಯವಿರುವ ಎಲ್ಲಾ ಚಿಕಿತ್ಸಾ ವಿಭಾಗಗಳನ್ನು ಆರಂಭಿಸುವುದಕ್ಕೆ ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಮತ್ತು ಪರಿಕರಗಳಿಗೆ ಸುಮಾರು 270 ಕೋಟಿ ಪ್ರಾಥಮಿಕ ಅಂದಾಜು ಪಟ್ಟಿಯನ್ನು ಸಿದ್ಧತೆ ಮಾಡಲಾಗಿದೆ. 450 ಹಾಸಿಗೆಗಳ ಆಸ್ಪತ್ರೆಯನ್ನು 750 ಹಾಸಿಗೆಗೆ ಪರಿವರ್ತಿಸಲಾಗುವುದಲ್ಲದೇ ಮುಂದೆ ಆವಶ್ಯವಿದ್ದರೆ 1000 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಎರಡು ಅಂತಸ್ತುನ್ನು ಹಚ್ಚಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಯ ಕಾಂಪೌಂಡ್, ಒಳ ಹಾಸ್ಟೆಲ್ ನಿರ್ಮಾಣ, ಆಸ್ಪತ್ರೆಗೆ ಬೇಕಾಗುವ ಮೂಲಭೂತ ಸೌಕರ್ಯಗಳಿಗೆ ಹಾಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಲು ಸುಮಾರು 620 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ ಎಂದ ಅವರು, ಅದರಲ್ಲಿ  ಕೇಂದ್ರ ಹಾಗೂ ರಾಜ್ಯ ಸರಕಾರಗಳು 60:40 ಅನುಪಾತದಲ್ಲಿ ಹಣ ನೀಡಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಶಾಸಕ ಎಂ.ಕೆ.ಪ್ರಾಣೇಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್, ಸಮನ್ವಯಾಧಿಕಾರಿ ಡಾ.ರೋಹಿತ್‍ ಕುಮಾರ್ ಡಾ.ರವಿಶಂಕರ್, ಡಿ.ಎಚ್.ಒ ಡಾ.ಅಶ್ವತ್ ಬಾಬು, ಜಿಲ್ಲಾ ಸರ್ಜನ್ ಡಾ.ಎಸ್.ಕುಮಾರ್, ವಾಸ್ತು ಶಿಲ್ಪಿ ತಜ್ಞರಾದ ಗೀತಾ, ಇಲಾಖೆಯ ಇಂಜಿನಿಯರ್ ಲಕ್ಷ್ಮೀಪತಿ ಸೇರಿ ಅನೇಕರು ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News