ನೆರೆಪೀಡಿತ ಗ್ರಾಮಗಳನ್ನು ಸಿಟಿ ರವಿ ದತ್ತು ಪಡೆದು ಮಾದರಿಯಾಗಲಿ: ಸಿದ್ದರಾಮಯ್ಯ

Update: 2019-09-20 18:44 GMT

ಚಿಕ್ಕಮಗಳೂರು, ಸೆ.20: ಶ್ರೀಮಂತ ಕಾಂಗ್ರೆಸ್‍ನವರು ನೆರೆ ಸಂತ್ರಸ್ತರ ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಿ ಎಂಬ ಸಚಿವ ಸಿಟಿ ರವಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಸಚಿವ ಸಿಟಿ ರವಿ ನೆರೆ ಸಂತ್ರಸ್ತರ ಎಷ್ಟು ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆಂಬುದನ್ನು ಮೊದಲು ಹೇಳಲಿ, ಅವರು ಯಾವ ಗ್ರಾಮವನ್ನೂ ದತ್ತು ತೆಗೆದುಕೊಳ್ಳದೇ ಇನ್ನೊಬ್ಬರಿಗೆ ಹೇಳುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. 

ತಾಲೂಕಿನ ಸಖರಾಯ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೇವಣ ಸಿದ್ದೇಶ್ವರ ಸ್ವಾಮಿ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಶುಕ್ರವಾರ ಸಂಜೆ ಸಖರಾಯಪಟ್ಟಣಕ್ಕೆ ಆಗಮಿಸಿದ್ದ ವೇಳೆ, ಸಚಿವ ಸಿಟಿ ರವಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಸಂಭವಿಸಿದ ಅತಿವೃಷ್ಟಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಎಲ್ಲೆಡೆ ದೂರುಗಳು ಕೇಳಿ ಬರುತ್ತಿವೆ. 

ಇದನ್ನೇ ಕಾಂಗ್ರೆಸ್‍ನವರೂ ಹೇಳುತ್ತಿದ್ದಾರೆ. ಇದಕ್ಕೆ ಸಚಿವ ರವಿ ಸಮರ್ಪಕವಾದ ಉತ್ತರ ನೀಡಬೇಕೇ ಹೊರತು, ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಸಂತ್ರಸ್ತರಿಗೆ ನೆರವು, ಪರಿಹಾರ ನೀಡುವುದು ಸರಕಾರದ ಕರ್ತವ್ಯ. ಆದರೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ಸಂತ್ರಸ್ತರನ್ನು ನಿರ್ಲಕ್ಷಿಸಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ದತ್ತು ಪಡೆಯಿರಿ ಎಂದು ಹೇಳಿಕೆ ನೀಡುತ್ತ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸಿಟಿ ರವಿ ಸಂತ್ರಸ್ತರ ಕೆಲ ಗ್ರಾಮಗಳನ್ನು ದತ್ತು ಪಡೆದುಕೊಂಡು ಕಾಂಗ್ರೆಸ್ಸಿಗರಿಗೆ ಮಾದರಿಯಾಗಲಿ ಎಂದು ಹೇಳಿದರು. 

ನಂತರ ಅವರು ಪಟ್ಟಣ ಸಮೀಪದ ಕೋಡಿ ಮಠಕ್ಕೆ ಭೇಟಿ ನೀಡಿ ಕೆಲ ಹೊತ್ತು ಸ್ವಾಮೀಜಿಯೊಂದಿಗೆ ಮಾತನಾಡಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡ ಡಾ.ಡಿ.ಎಲ್.ವಿಜಯ್‍ ಕುಮಾರ್, ಮಾಜಿ ಎಮ್ಮೆಲ್ಸಿ ಗಾಯತ್ರಿ ಶಾಂತೇಗೌಡ, ವಿಧಾನ ಪರಿಷತ್ ಉಪಸಭಾಪತಿ ಭೋಜೇಗೌಡ ಸೇರಿದಂತೆ ಪ್ರಮುಖ ಮುಖಂಡರು ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News