ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ಎನ್‍ಎಸ್‍ಯುಐ ವಿನೂತನ ಪ್ರತಿಭಟನೆ

Update: 2019-09-20 18:48 GMT

ಶಿವಮೊಗ್ಗ, ಸೆ. 20: ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಎನ್‍ಎಸ್‍ಯುಐ ಸಂಘಟನೆಯು ಶುಕ್ರವಾರ ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ವಿನೂತನ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿತು. 

ಕಾರ್ಯಕರ್ತರು ಶೂ ಪಾಲೀಶ್, ಕಾಫಿ-ಟೀ, ತರಕಾರಿ ಮಾರಾಟ ಮಾಡುವ ಮೂಲಕ ದೇಶದ ವಿದ್ಯಾವಂತ ಸಮುದಾಯ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಗಮನ ಸಳೆಯುವ ಕಾರ್ಯ ನಡೆಸಿದರು. 

ಜೊತೆಗೆ 'ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ. ಇಲ್ಲ ಭಡ್ತಿಕೊಡಿ', 'ಅಚ್ಚೆದಿನ್ ಯಾವಾಗ ಬರುತ್ತೆ', 'ನಾನು ಬಿಎ ಪದವೀಧರ ಆದರೆ ಆಟೊ ಚಾಲಕ', 'ನಾನು ಇಂಜಿನಿಯರಿಂಗ್ ವಿದ್ಯಾರ್ಥಿ. ಉದ್ಯೋಗ ಮಾತ್ರ ಬೂಟ್ ಪಾಲಿಷ್', 'ಅಂಬಾನಿ ಅದಾನಿಗೆ ಅಚ್ಚೇದಿನ್ ಸಾಮಾನ್ಯ ಜನರಿಗೆ ಕೆಟ್ಟದಿನ', 'ಅಚ್ಚೇದಿನ್ ಕಬ್ ಆಯೇಗಾ...' ಎಂಬಿತ್ಯಾದಿ ಫ್ಲಕಾರ್ಡ್‍ಗಳನ್ನು ಕಾರ್ಯಕರ್ತರು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ವಿಫಲ: ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಕುಸಿದಿದೆ. ಕಾರ್ಖಾನೆಗಳು ಬಾಗಿಲು ಮುಚ್ಚುತ್ತಿವೆ. ವಿವಿಧ ಉದ್ಯಮ ಘಟಕಗಳು ವ್ಯವಹಾರ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದೇಶದ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಅತೀವ ಮುತುವರ್ಜಿ ವಹಿಸುತ್ತದೆ. ಇಂತಹ ಉದ್ಯಮಗಳಿಗೆ ಅನುಕೂಲವಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಸಂಕಷ್ಟದಲ್ಲಿರುವ ಮಧ್ಯಮ-ಸಣ್ಣ ಉದ್ಯಮಗಳಿಗೆ ಅನುಕೂಲ ಕಲ್ಪಿಸಿಕೊಡಲು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಳೆದಿದೆ. ಸರ್ಕಾರದ ದುರಾಡಳಿತದಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುವಂತಾಗಿದೆ. ವಿದ್ಯಾವಂತ ನಿರುದ್ಯೋಗಿಗಳು ಕೆಲಸವಿಲ್ಲದೆ ಪರದಾಡುವಂತಾಗಿದೆ. ಇನ್ನಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಅಧೋಗತಿಗೆ ಕುಸಿಯುತ್ತಿರುವ ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಎನ್‍ಎಸ್‍ಯುಐ ರಾಜ್ಯ ಮುಖಂಡ ಕೆ.ಚೇತನ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಜೆ.ಮಧುಸೂಧನ್, ಎನ್‍ಎಸ್‍ಯುಐ ನಗರಾಧ್ಯಕ್ಷ ವಿಜಯ್, ನಗರ ಕಾರ್ಯಾಧ್ಯಕ್ಷ ರಾಘವೇಂದ್ರ, ಮುಖಂಡರಾದ ವಿನಯ್ ತಾಂಡಲೆ, ಶ್ರೀಜಿತ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News