15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ

Update: 2019-09-21 13:03 GMT

ಬೆಂಗಳೂರು, ಸೆ.21: ಸ್ಪೀಕರ್ ನೀಡಿರುವ ರೂಲಿಂಗ್ ಹಿನ್ನೆಲೆಯಲ್ಲಿ 17 ಅನರ್ಹ ಶಾಸಕರ ಪೈಕಿ 15 ಮಂದಿ ಪ್ರತಿನಿಧಿಸುತ್ತಿದ್ದ ವಿಧಾನಸಭಾ ಕ್ಷೇತ್ರಗಳಿಗೆ ಭಾರತೀಯ ಚುನಾವಣಾ ಆಯೋಗವು ಉಪ ಚುನಾವಣೆಯನ್ನು ಘೋಷಿಸಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಶನಿವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಿರ್ವಾಚನ ನಿಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೆ.23ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಸೆ.30 ಅಂತಿಮ ದಿನ. ಅಕ್ಟೋಬರ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.3ರಂದು ನಾಮಪತ್ರಗಳನ್ನು ಹಿಂಪಡೆಯಲು ಅಂತಿಮ ದಿನ ಎಂದರು.

ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಅ.24ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್.ಪೇಟೆ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದರು.

2018ರಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡಾಗ ಪರಾಜಿತ ಅಭ್ಯರ್ಥಿಗಳು ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಅನರ್ಹಗೊಳಿಸಿ, ನಮ್ಮನ್ನು ಆಯ್ಕೆ ಮಾಡಬೇಕು ಎಂದು ಹೈಕೋರ್ಟ್‌ನಲ್ಲಿ ದಾಖಲಿಸಿರುವ ತಕರಾರು ಅರ್ಜಿಗಳು ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ಚುನಾವಣೆಯನ್ನು ಘೋಷಣೆ ಮಾಡಲಾಗಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ಆದರೆ, ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಅರ್ಜಿಗಳು ಇನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಆದುದರಿಂದ, ಈ ಉಪ ಚುನಾವಣೆಯನ್ನು ಸ್ಪೀಕರ್ ರೂಲಿಂಗ್ ಹಿನ್ನೆಲೆಯಲ್ಲಿ ಘೋಷಿಸಲಾಗಿದೆ. ಇದು ಕಾನೂನು ವಿಚಾರವಾಗಿದ್ದು, ಊಹಾಪೋಹಗಳಿಗೆಲ್ಲ ಉತ್ತರ ಕೊಡುವುದು ಸೂಕ್ತವಾಗುವುದಿಲ್ಲ ಎಂದು ಸಂಜೀವ್ ಕುಮಾರ್ ಹೇಳಿದರು.

2019ರ ಜನವರಿ 1ರಂತೆ ಇರುವ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 37,49,047 ಮತದಾರರಿದ್ದಾರೆ (ಪುರುಷರು-19,12,084, ಮಹಿಳೆಯರು-18,36,566, ಇತರರು-397, ಹೊಸ ಮತದಾರರು-70,619). 4185 ಮತಗಟ್ಟೆಗಳು, ಬ್ಯಾಲೆಟ್ ಯೂನಿಟ್‌ಗಳು 8370, ಕಂಟ್ರೋಲ್ ಯೂನಿಟ್‌ಗಳು 8370 ಹಾಗೂ 8370 ವಿವಿಪ್ಯಾಟ್‌ಗಳ ಅಗತ್ಯವಿದೆ. ಚುನಾವಣೆ ನಡೆಸಲು 22,598 ಮಂದಿ ಸಿಬ್ಬಂದಿಯ ಅಗತ್ಯವಿದೆ ಎಂದು ಸಂಜೀವ್‌ಕುಮಾರ್ ಎಂದು ತಿಳಿಸಿದರು.

ಈ ಉಪ ಚುನಾವಣೆಯಲ್ಲಿ ಎಂ3 ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಬಳಕೆ ಮಾಡಲಾಗುವುದು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಎಂ3 ಇವಿಎಂಗಳನ್ನು ಬಳಕೆ ಮಾಡಲಾಗಿತ್ತು. ಇನ್ನುಳಿದ ಎಲ್ಲ ಕ್ಷೇತ್ರಗಳಲ್ಲೂ ಎಂ2 ಇವಿಎಂಗಳನ್ನು ಬಳಸಲಾಗಿತ್ತು. ಈಗಾಗಲೇ, ತಮಿಳುನಾಡು ಸೇರಿದಂತೆ ಇನ್ನಿತರ ಕಡೆಯಿಂದ ಇವಿಎಂಗಳನ್ನು ತರಿಸಿಕೊಂಡಿದ್ದೇವೆ ಎಂದು ಸಂಜೀವ್‌ಕುಮಾರ್ ಹೇಳಿದರು.

ಉಪ ಚುನಾವಣೆಯಲ್ಲೂ ಎಂಸಿಸಿ ಹಾಗೂ ವೆಚ್ಚ ನಿರ್ವಹಣೆಯ ಮೇಲೆ ನಿಗಾ ಇಡಲಾಗುವುದು. ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಟೋಲ್ ಫ್ರೀ ಸಂಖ್ಯೆ 1950 ಅನ್ನು ಮತ್ತಷ್ಟು ಬಲಪಡಿಸಲಾಗುವುದು. ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ರಾಜಕೀಯ ಪಕ್ಷಗಳು ತಮ್ಮ ಬೂತ್‌ಮಟ್ಟದ ಏಜೆಂಟರನ್ನು ನೇಮಕ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟು ಹೋಗಿದ್ದರೆ, ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ನೀತಿ ಸಂಹಿತೆ: ನೆರೆ ಪರಿಹಾರ ಕಾರ್ಯಗಳು ಹಾಗೂ ಮೈಸೂರು ದಸರಾ ಉತ್ಸವಕ್ಕೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ, ಇದಕ್ಕಾಗಿ ಚುನಾವಣಾ ಆಯೋಗದಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ. ನೆರೆ ಪರಿಹಾರ ಕಾರ್ಯಗಳಲ್ಲಿ ರಾಜಕಾರಣಿಗಳು ಪಾಲ್ಗೊಳ್ಳುವಂತಿಲ್ಲ. ಯಾವುದೇ ಹೊಸ ಯೋಜನೆಗಳು, ಘೋಷಣೆಗಳ ವಾಗ್ದಾನ ಮಾಡುವಂತಿಲ್ಲ ಎಂದು ಅವರು ಹೇಳಿದರು.

ಸ್ಪೀಕರ್ ರೂಲಿಂಗ್ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿರುವ 17 ಮಂದಿ ಶಾಸಕರು 15ನೇ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಯಾವುದೇ ರೀತಿಯಲ್ಲಿ ಈ ಸದನದ ಸದಸ್ಯರಾಗಿ ಪ್ರವೇಶಿಸಲು ಸಾಧ್ಯವಾಗದಂತೆ ಅನರ್ಹಗೊಳಿಸಲಾಗುತ್ತಿದೆ ಎಂದು ಸ್ಪೀಕರ್ ಆಗಿದ್ದ ವೇಳೆ ಕೆ.ಆರ್.ರಮೇಶ್ ಕುಮಾರ್ ಆದೇಶ ಹೊರಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News