ಸರಕಾರದ ನಿರ್ಲಕ್ಷ್ಯ ವಿರೋಧಿಸಿ ದಿಲ್ಲಿಯತ್ತ ಪಾದಯಾತ್ರೆ ಹೊರಟ ಸಾವಿರಾರು ರೈತರು

Update: 2019-09-21 10:02 GMT

ಹೊಸದಿಲ್ಲಿ, ಸೆ.21: ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾವಿರಾರು ರೈತರು ಉತ್ತರ ಪ್ರದೇಶದ ಸಹರಣಪುರದಿಂದ ರಾಜಧಾನಿ ದಿಲ್ಲಿಗೆ ಇಂದು ಪಾದಯಾತ್ರೆ ಹೊರಟಿದ್ದಾರೆ. ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಆಯೋಜಿಸಲಾಗಿರುವ  ಈ ಕಿಸಾನ್ ಮಜ್ದೂರ್ ಯಾತ್ರೆಯು ಸರಕಾರವಿನ್ನೂ ಈಡೇರಿಸದ ರೈತರ ಹಲವಾರು  ಆಗ್ರಹಗಳನ್ನು ನರೇಂದ್ರ ಮೋದಿ ಸರಕಾರದ ಮುಂದಿಡಲಿದೆ.

ಸಾವಿರಾರು ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆಂದು ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ರಾಧೇ ಠಾಕುರ್ ಹೇಳಿದ್ದಾರೆ. “ರೈತರ ಪರಿಸ್ಥಿತಿ ಹೇಳತೀರದಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಅವರು ಕಂಗಾಲಾಗಿದ್ದರೂ ಸರಕಾರವಿನ್ನೂ ನಿದ್ದೆಯಲ್ಲಿದೆ, ಕಬ್ಬು ಬೆಳೆಗಾರರಿಗೆ  ಅವರ ಬಾಕಿ ಪಾವತಿಸಲಾಗಿಲ್ಲ. ವಿದ್ಯುಚ್ಛಕ್ತಿ ದರಗಳನ್ನು ಏರಿಸುವ ಮೂಲಕ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ರೈತರ ಮೇಲೆ ದೊಡ್ಡ ಹೊರೆ ಸೃಷ್ಟಿಸಿದೆ. ಹಲವು ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಇದೇ ಕಾರಣದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ'' ಎಂದು ಅವರು ವಿವರಿಸಿದ್ದಾರ.

“ರೈತರ ಬೇಡಿಕೆ ಈಡೇರುವ ತನಕ ಅವರು ದಿಲ್ಲಿ ಬಿಟ್ಟು ಕದಲುವುದಿಲ್ಲ ಎಂದು ಅವರು ಘೋಷಿಸಿದರು. ಸರಕಾರ ಮಾತ್ರವಲ್ಲ, ವಿಪಕ್ಷ ಕೂಡ ರೈತರ ಬಗ್ಗೆ ಕಾಳಜಿ ಹೊಂದಿಲ್ಲ” ಎಂದೂ ಅವರು ದೂರಿದರು ಹಾಗೂ ಇದೇ ಕಾರಣದಿಂದ ರೈತರು ಬೀದಿಗಿಳಿಯುವಂತಾಗಿದೆ ಎಂದರು.

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ವ್ಯಾಪಕ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕಿಸಾನ್ ಸಂಘದ ಹನ್ನೊಂದು ಪ್ರತಿನಿಧಿಗಳು ಕೃಷಿ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತನಾಡಲಿದ್ದಾರೆ. “ನಮ್ಮ ಬೇಡಿಕೆಗಳನ್ನು ಒಪ್ಪಿದರೆ ಇಲ್ಲಿಂದಲೇ ವಾಪಸಾಗುತ್ತೇವೆ ಇಲ್ಲದೇ ಹೋದರೆ ದಿಲ್ಲಿಗೆ  ಯಾತ್ರೆ ಮುಂದುವರಿಯುತ್ತದೆ'' ಎಂದು ಕಿಸಾನ್ ಸಂಘದ ಅಧ್ಯಕ್ಷ ಪುರಾನ್ ಸಿಂಗ್ ಹೇಳಿದ್ದಾರೆ.

ಸಾಲ ಮನ್ನಾ, ನೀರಾವರಿಗೆ ಉಚಿತ ವಿದ್ಯುತ್, ಉಚಿತ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು, 60 ವರ್ಷದ ನಂತರ ಮಾಸಿಕ ರೂ 5,000 ಪಿಂಚಣಿ, ಬೆಳೆಗಳ ಬೆಲೆಯನ್ನು ರೈತರ ಪ್ರತಿನಿಧಿಗಳ ಸಮ್ಮುಖ ನಿರ್ಧರಿಸಬೇಕು, ಕೃಷಿ ಚಟುವಟಿಕೆ ವೇಳೆ ರೈತರು ಸಾವಿಗೀಡಾದರೆ ಹುತಾತ್ಮರ ಸ್ಥಾನಮಾನ ನೀಡಬೇಕು, ಅಪಘಾತ ವಿಮೆ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೈಕೋರ್ಟ್ ಹಾಗೂ ಎಐಐಎಂಎಸ್ ಸ್ಥಾಪಿಸಬೇಕು, ಅಲೆಮಾರಿ ದನಗಳನ್ನು ಸಾಕುವವರಿಗೆ ದಿನಂಪ್ರತಿ ರೂ 300 ಭತ್ಯೆ ನೀಡಬೇಕು ಹಾಗೂ ನದಿಗಳನ್ನು ಮಾಲಿನ್ಯ ಮುಕ್ತಗೊಳಿಸಬೇಕು ಹಾಗೂ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕೆಂಬುದು ರೈತರ ಬೇಡಿಕೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News