ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಚಾರಗಳನ್ನು ಹಂಚಿಕೊಳ್ಳುವ ಸನ್ನಿವೇಶವೇ ಇಲ್ಲದಂತಾಗಿದೆ: ವಿಮರ್ಶಕ ರಾಜೇಂದ್ರ ಚೆನ್ನಿ

Update: 2019-09-22 17:56 GMT

ಮೈಸೂರು,ಸೆ.22: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ವಿಚಾರಗಳನ್ನು ಧೈರ್ಯವಾಗಿ ಹೇಳುವಂತ ಸನ್ನಿವೇಶ, ಒಂದು ಸಮುದಾಯದಲ್ಲಿ  ಕುಳಿತುಕೊಂಡು ನಮ್ಮ ಭಾವನೆಗಳನ್ನು ಸಭಿಕರೊಂದಿಗೆ ಹಂಚಿಕೊಳ್ಳುವ ಮತ್ತು ಪ್ರಭುತ್ವದಲ್ಲಿರುವವರಿಗೆ ಸತ್ಯವನ್ನು ಹೇಳಬೇಕು ಎನ್ನುವ ಸನ್ನಿವೇಶ ಪ್ರಸ್ತುತ ದಿನಗಳಲ್ಲಿ ಇಲ್ಲ ಎಂದು ಖ್ಯಾತ ವಿಮರ್ಶಕ ರಾಜೇಂದ್ರ ಚೆನ್ನಿ ಬೇಸರ ವ್ಯಕ್ತಪಡಿಸಿದರು.

ನಗರದ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‍ನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ರವಿವಾರ ಸಾಹಿತಿ ನಟರಾಜ್ ಹುಳಿಯಾರ್ ಅವರ ಸಾಹಿತ್ಯ “ಸಮಕಾಲೀನ ಸ್ಪಂದನ” ಇಂತಿ ನಮಸ್ಕಾರಗಳು, ತೆರೆದ ಪಠ್ಯ, ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾನಾಡಿದರು.

ಇಂತಹ ಸಂದರ್ಭದಲ್ಲಿ ನಟರಾಜ್ ಹುಳಿಯಾರ್ ಅವರ ನೆನಪು ನಮಗೆ ಬರುತ್ತದೆ. ಲಂಕೇಶ್ ಪತ್ರಿಕೆ ಬಹುದೊಡ್ಡ ಸಾಂಸ್ಕೃತಿಕ ಚಳವಳಿಯನ್ನು ಹುಟ್ಟುಹಾಕಿತು. ಆ ಸಂದರ್ಭದಲ್ಲಿ ನಟರಾಜ್ ಹುಳಿಯಾರ್ ಒಂದು ಭಾಗವಾಗಿ ಕೆಲಸ ಮಾಡುವುದಕ್ಕಿಂತ ತಮ್ಮದೇ ಆದ ವ್ಯಕ್ತಿತ್ವವನ್ನು ಇಟ್ಟುಕೊಂದು ಆಧುನಿಕ ಸಮಾಜವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದರು. ನಮ್ಮ ಸಾಹಿತ್ಯದ ಇತಿಹಾಸಕಾರರು ಆಧುನಿಕ ಕಾಲದಲ್ಲಿ ನವೋದಯ ಮತ್ತು ನವ್ಯ ಚಳುವಳಿಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕ ಆದುನಿಕ ಕಾಲದಲ್ಲಿ ಕಟ್ಟಿದ ಚಳುವಳಿ ಲಂಕೇಶ್ ಪತ್ರಿಕೆ ಚಳುವಳಿ ಎಂದು ಹೇಳಿದರು.

ಆಧಿಕಾರದಲ್ಲಿರುವ ಪ್ರಭುತ್ವ ಮತ್ತು ಅದರ ಒಳಗೆ ಇರುವಂತೆ ಸಂಸ್ಥೆ ತನ್ನದೇ ಆದ ಒಂದು ಸಮಾಜವನ್ನು ಸೃಷ್ಠಿಮಾಡಿಕೊಂಡಿರುತ್ತದೆ. ಆದರೆ ಅದರ ಆಚೆಗೆ ಒಂದು ಸಮಾಜ ಇರುತ್ತದೆ. ಅದು ನಾಗರಿಕ ಸಮಾಜ. ಈ ಸಂಧರ್ಭದಲ್ಲಿ ಲಂಕೇಶ್ ಪತ್ರಿಕೆ ಆಧುನಿಕತೆಯಲ್ಲಿ ನಾಗರಿಕ ಸಮಾವನ್ನು ಕಟ್ಟಿಕೊಟ್ಟಿತು. ಆ ಕಾಲಘಟ್ಟದಲ್ಲಿ ಲಂಕೇಶ್ ಪತ್ರಿಕೆಯ ಅತ್ಯುತ್ತಮ ಪ್ರತಿನಿಧಿಯಾಗಿ ಬಂದವರು ನಟರಾಜ್ ಹುಳಿಯಾರ್. ಇವರನ್ನು ಲಂಕೆಶ್ ಪತ್ರಿಕೆಯ ಒಂದು ಭಾಗವಾಗಿ ನೋಡುವುದಕ್ಕಿಂತ ತನ್ನದೇ ಆದ ವ್ಯಕ್ತಿತ್ವದ ಮೂಲಕ ಸಮಾಜವನ್ನು ತಲುಪುತ್ತಿದ್ದಾರೆ ಎಂದು ಹೇಳಿದರು.

ಜಾತ್ಯಾತೀಯ ರಾಷ್ಟ್ರದಲ್ಲಿ ಕೆಲವು ಪಂಡಿತರು ಸೆಕ್ಯುಲರ್ ಯುರೋಪಿನಿಂದ ಬಂತೋ ಎಲ್ಲಿಂದ ಬಂತೋ ಎಂಬ ಸ್ಟುಪಿಡ್ ಚರ್ಚೆಗಳನ್ನು ಮಾಡುತ್ತಾರೆ. ಆದರೆ ಜಾತ್ಯಾತೀತ ಎಂಬುದು ನಮ್ಮೊಳಗಿನ ರಾಷ್ಟ್ರದಲ್ಲೇ ಇರುವಂತಹುದು. ಯಾರಿಗೆ ಪ್ರಮಾಣಿಕತೆ , ಪ್ರೀತಿ, ಅಂತಃಕರಣ ಇರುತ್ತದೊ ಅವರೆಲ್ಲಾ ಜಾತ್ಯತೀತವಾದಿಗಳು, ಆದು ಲಂಕೇಶ್ ಪತ್ರಿಕೆ ಮೂಲಕ ಹೊರಬಂತು ಎಂದು ಹೇಳಿದರು.

ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ಬರಹಗಳಿಗೆ ಪ್ರೇರಿತರಾಗಿ ಮುಸ್ಲಿಂ ಯುವಕರು ತಮ್ಮ ಬರವಣೆಗಯನ್ನು ತೊಡಗಿಸಿಕೊಂಡರು. ಮುಸಲ್ಮಾನರು ಕನ್ನಡ ಭಾಷೆಯಲ್ಲಿ ತಮ್ಮ ಬರವಣಿಗೆಯನ್ನು ಉತ್ತಮವಾಗಿ ಬರೆಯುತ್ತಿದ್ದರು. ಅಂತಹ ಬದಲಾವಣೆಯನ್ನು ತರುವ ಮೂಲಕ ಸಾಂಸ್ಕೃತಿಕ ರೂಪವನ್ನು ಲಂಕೆಶ್ ಪತ್ರಿಕೆ ಮತ್ತು ನಟರಾಜ್ ಹುಳಿಯಾರ್ ಕಟ್ಟಿಕೊಟ್ಟರು ಎಂದು ಸ್ಮರಿಸಿದರು.

ನಟರಾಜ್ ಹುಳಿಯಾರ್ ಅವರ ಇಂತಿ ನಮಸ್ಕಾರಗಳು ಪುಸ್ತಕವನ್ನು ಸಾಂಸ್ಕೃತಿಕ ಗದ್ಯವಾಗಿ ನಾವು ನೋಡಬೇಕು. ತಮ್ಮ ರಾಜಕೀಯ ನಿಲವು ಏನು ಎಂಬುದನ್ನು ಕಟ್ಟಿಕೊಡುತ್ತದೆ. ಜೀವಂತ ಪಾತ್ರಗಳ ಮೂಲಕ ಇಬ್ಬರು ವ್ಯಕ್ತಿಗಳನ್ನು ಅದ್ಭುತವಾಗಿ ಪರಿಚಯಿಸಿದ್ದಾರೆ ಎಂದು ಹೇಳಿದರು.

ಹಿಂದೆ ಇದ್ದಂತಹ ವಾತಾವರಣ ಮರೆಯಾಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ತಮ್ಮ ತಮ್ಮ ಕಥೆಗಳನ್ನು ತಮ್ಮ ತಮ್ಮದೇ ರೀತಿಯಲ್ಲಿ ಹೇಳುತ್ತಾರೋ ಅದನ್ನು ಜಾತ್ಯಾತೀತ ಎನ್ನುತ್ತೇವೆ. ಆದರೆ ಎಲ್ಲರ ಕಥೆಯೂ ಒಂದೇ ರೀತಿ ಇರಬೇಕು ಎನ್ನುವುದನ್ನು ಸಮಾಜ ವ್ಯವಸ್ಥೆಯ ಸರ್ವನಾಶ ಎನ್ನಬೇಕಾಗುತ್ತದೆ ಎಂದು ಏಕ ಭಾಷೆ, ಸಂಸ್ಕೃತಿ, ವಿರುದ್ಧ ಕಿಡಿಕಾರಿದರು.

ಡಾ.ಭಾರತೀ ದೇವಿ, ಮತ್ತು ರಂಗನಾಥ ಕಂಟನಕುಂಟೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News