ಟ್ರಂಪ್ ಸಮ್ಮುಖದಲ್ಲೇ ಪಾಕ್ ಮೇಲೆ ಮೋದಿ ವಾಗ್ದಾಳಿ

Update: 2019-09-23 03:43 GMT

ಹೂಸ್ಟನ್, ಸೆ.23: ಭಾರತ ಸೇರಿದಂತೆ ಹಾಗೂ ವಿಶ್ವಾದ್ಯಂತ ಭಯೋತ್ಪಾದನೆಯನ್ನು ಪ್ರಾಯೋಜಿಸಲಾಗುತ್ತಿದ್ದು, ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಕದನ ನಡೆಯಬೇಕಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲೇ ಪಾಕ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ರವಿವಾರ ರಾತ್ರಿ 'ಹೌಡಿ ಮೋದಿ' ರ್ಯಾಲಿಯಲ್ಲಿ ಸೇರಿದ್ದ ಭಾರತೀಯ ಮೂಲದ ದೊಡ್ಡ ಜನಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪಾಕಿಸ್ತಾನವನ್ನು ನೇರವಾಗಿ ಹೆಸರಿಸದಿದ್ದರೂ, ಅವರ ಉಲ್ಲೇಖಗಳು ಹಾಗೂ ಸನ್ನಿವೇಶಗಳು ಪಾಕಿಸ್ತಾನದ ಕುರಿತಾಗಿದ್ದವು ಎನ್ನುವುದು ಸ್ಪಷ್ಟವಾಗಿ ತಿಳಿದುಬಂತು. 'ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆ'ಯಿಂದ ಅಮಾಯಕ ನಾಗರಿಕರನ್ನು ರಕ್ಷಿಸುವ ಅಗತ್ಯವಿದೆ ಎಂದು ಇದಕ್ಕೂ ಮುನ್ನ ಟ್ರಂಪ್ ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಮೋದಿ ಸ್ವತಃ ಎದ್ದುನಿಂತು ಗೌರವ ಸೂಚಿಸಿದ್ದಲ್ಲದೇ, ಭಯೋತ್ಪಾನೆ ವಿರುದ್ಧದ ಹೋರಾಟಕ್ಕಾಗಿ ಟ್ರಂಪ್‌ಗೆ ಜೈಕಾರ ಹಾಕುವಂತೆ ಸಭಿಕರನ್ನು ಕೋರಿದರು.

ಜಮ್ಮು ಕಾಶ್ಮೀರವನ್ನು ಭಾರತದ ಜತೆ ಉತ್ತಮವಾಗಿ ಸಮನ್ವಯಗೊಳಿಸಲು ಕೈಗೊಂಡ ಭಾರತದ ನಿರ್ಧಾರವನ್ನು ವಿರೋಧಿಸಿದ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಅವರು, "ಭಾರತದಲ್ಲಿ ಏನು ಸಂಭವಿಸಿದೆಯೋ ಅದನ್ನು ಆಕ್ಷೇಪಿಸುವ ಮೂಲಕವೇ ಕೆಲ ಜನ ತಮ್ಮ ದೇಶವನ್ನು ನಿಭಾಯಿಸುತ್ತಾರೆ" ಎಂದು ಟೀಕಿಸಿದರು.

"ಸಪ್ಟೆಂಬರ್ 11ರ ನ್ಯೂಯಾರ್ಕ್ ದಾಳಿ, ನವೆಂಬರ್ 26ರ ಮುಂಬೈ ದಾಳಿಗಳ ಸಂಚುಕೋರರು ಎಲ್ಲಿದ್ದರು? ಎಂದು ಪ್ರಶ್ನಿಸಿದ ಮೋದಿ, ಒಸಾಮಾ ಬಿನ್ ಲಾದೆನ್ ಹಾಗೂ ಖಾಲಿದ್ ಶೇಖ್ ಮುಹಮ್ಮದ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದರು ಎನ್ನುವುದನ್ನು ಮುಂದಿನ ಸಾಲಿನಲ್ಲಿ ಕುಳಿತಿದ್ದ ಟ್ರಂಪ್ ಹಾಗೂ ಅಮೆರಿಕ ಸಂಸದರಿಗೆ ನೆನಪಿಸಿದರು.

ಸಮಾವೇಶದ ಕೊನೆಗೆ ಟ್ರಂಪ್ ಹಾಗೂ ಮೋದಿ ಜತೆಯಾಗಿ ಸಭಿಕರತ್ತ ಕೈಬೀಸಿದರು. ಇದಕ್ಕೂ ಮುನ್ನ ಉಭಯ ನಾಯಕರು ಪರಸ್ಪರ ಪ್ರೀತಿ ಹಾಗೂ ವಿಶ್ವಾಸವನ್ನು ಪ್ರದರ್ಶಿಸುವ ಮೂಲಕ, ಉಭಯ ದೇಶಗಳ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಏರಿಸಲು ಬೆಂಬಲ ನೀಡುವ ಭರವಸೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News