‘ಹೌಡಿ ಮೋದಿ’: ಭಾರತದ ಮಾಧ್ಯಮಗಳಲ್ಲಿ ಸುದ್ದಿಯಾಗದ ಮೋದಿ ವಿರುದ್ಧದ ಭಾರೀ ಪ್ರತಿಭಟನೆ

Update: 2019-09-23 11:13 GMT

ಹೌಸ್ಟನ್, ಸೆ.23: ಭಾರತೀಯ ಮಾಧ್ಯಮಗಳು ನಿನ್ನೆ ಹ್ಯೂಸ್ಟನ್ ನಲ್ಲಿ ಕಿಕ್ಕಿರಿದು ತುಂಬಿದ್ದ ಎನ್ ‍ಆರ್‍ ಜಿ ಸ್ಟೇಡಿಯಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ‘ಹೌಡಿ ಮೋದಿ’ ಕಾರ್ಯಕ್ರಮದ ಬಗ್ಗೆ ವರದಿ ಮಾಡಿದ್ದವು. ಟ್ರಂಪ್-ಮೋದಿ ಸ್ನೇಹ ಹಾಗೂ ಬಾಂಧವ್ಯದ ಸುದ್ದಿಗಳು ಭಾರತದ ಮಾಧ್ಯಮಗಳಲ್ಲಿ ತುಂಬಿಹೋಗಿವೆ. ಆದರೆ ಈ ಅಬ್ಬರದ ಪ್ರಚಾರದ ನಡುವೆ ಕಾರ್ಯಕ್ರಮ ನಡೆದ ಸ್ಟೇಡಿಯಂನ ಹೊರಗಡೆ ಮೋದಿ ವಿರುದ್ಧ ನಡೆದ ಭಾರೀ ಪ್ರತಿಭಟನೆಗಳ ಸುದ್ದಿಯನ್ನು ಭಾರತೀಯ ಮಾಧ್ಯಮಗಳು ಬಿತ್ತರಿಸುವ ಗೋಜಿಗೇ ಹೋಗಿಲ್ಲ.

ಆದರೆ ಅಮೆರಿಕಾದ ಮಾಧ್ಯಮಗಳು ಈ ಪ್ರತಿಭಟನೆಗಳ ವರದಿ ಮಾಡಿವೆ. ಭಾರತೀಯ ಮಾಧ್ಯಮಗಳು ಹೇಳದೇ ಇರುವುದನ್ನು ಸಿಎನ್‍ಎನ್ ಹೇಳಿದೆ-

ಹ್ಯೂಸ್ಟನ್‍ ನಿಂದ ಮೋದಿ ವಾಪಸ್ ಹೋಗುವಂತೆ ಸಂದೇಶ ನೀಡುವ ಸಲುವಾಗಿ ಪ್ರತಿಭಟನಾಕಾರರು #AdiosModi ಎಂಬ ಹ್ಯಾಶ್ ಟ್ಯಾಗ್ ಕೂಡ ಉಪಯೋಗಿಸಿದರು. ಇನ್ನೂ ನಿರ್ಬಂಧ ಮುಂದುವರಿಸಲ್ಪಟ್ಟಿರುವ ಕಾಶ್ಮೀರದಲ್ಲಿ ಏನಾಗುತ್ತದೆ ಎಂದು ಉತ್ತರಿಸಬೇಕೆಂದೂ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಈ ಪ್ರತಿಭಟನಾಕಾರರಲ್ಲಿ ಹಿಂದುಗಳು, ಸಿಖ್ಖರು, ಮುಸ್ಲಿಮರು ಹಾಗೂ ಕ್ರೈಸ್ತರೂ ಇದ್ದರು.

“ನಿಜವಾದ ಹಿಂದುಗಳು  ಗುಂಪು ಹತ್ಯೆ ನಡೆಸುವುದಿಲ್ಲ'', “ಹಿಂದು ಧರ್ಮ  ಸತ್ಯ, ಹಿಂದುತ್ವ ಮಿಥ್ಯೆ'' ಎಂಬಿತ್ಯಾದ ಬರೆಯಲಾದ ಪೋಸ್ಟರುಗಳನ್ನೂ ಪ್ರತಿಭಟನಾಕಾರರು ಕೈಗಳಲ್ಲಿ ಹಿಡಿದಿದ್ದರು. “ಮೋದಿ, ಮೋದಿ ನೀವು ಅಡಗಿಕೊಳ್ಳಲು ಸಾಧ್ಯವಿಲ್ಲ, ನೀವು ನರಮೇಧ ನಡೆಸಿದ್ದೀರಿ'' ಎಂದೂ ಅವರು ಆಕ್ರೋಶಭರಿತರಾಗಿ ಘೋಷಣೆ ಕೂಗುತ್ತಿರುವುದು ಕೇಳಿ ಬಂತು.

“ಬಿಳಿಯ ತೀವ್ರಗಾಮಿಗಳು ಹಿಂದು ತೀವ್ರಗಾಮಿಗಳನ್ನು ಭೇಟಿಯಾದ ಸ್ಥಳ'' ಎಂದು ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಕೆಲವರು ಟೀಕಿಸಿದ್ದಾರೆ. “ಹೌಸ್ಟನ್, ವಿ ಹ್ಯಾವ್ ಎ ಪ್ರಾಬ್ಲೆಂ, ಇಟ್ ಈಸ್ ಮೋದಿ'' ಎಂದು ಬರೆಯಲಾದ ಪೋಸ್ಟರನ್ನೂ ಕೆಲವರು ಹಿಡಿದಿದ್ದರು.

ಕೆಲವು ಪೋಸ್ಟರುಗಳಲ್ಲಿ ಮೋದಿಯನ್ನು ಹಿಟ್ಲರ್ ಗೆ  ಹೋಲಿಸಲಾಗಿದ್ದರೆ ಇನ್ನು ಕೆಲವರು ಆರೆಸ್ಸೆಸ್ ಅನ್ನು ಕು ಕ್ಲುಕ್ಸ್ ಖಾನ್ ಗೆ ಹೋಲಿಸಿ ಘೋಷಣೆ ಕೂಗಿದ್ದಾರೆ. ಮೋದಿ ವಿರುದ್ಧ ಪ್ರತಿಭಟನೆಗಳಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆಂದು  ಅಲ್ ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News