ನೆರೆ ಸಂತ್ರಸ್ತರ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆ

Update: 2019-09-23 12:11 GMT

ಬೆಂಗಳೂರು, ಸೆ. 23: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ನಾಳೆ(ಸೆ.24) ಬೆಳಗಾವಿಯಲ್ಲಿ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಾಂತ್ವನ ಹೇಳಲು ಬರಲಿಲ್ಲ: ಪ್ರಧಾನಿ ಮೋದಿ ಅಮೆರಿಕಾದ ಹೂಸ್ಟನ್‌ಗೆ ತೆರಳಿ ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಆದರೆ, ಕರ್ನಾಟಕ ರಾಜ್ಯದ ನೆರೆ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಾಂತ್ವನ ಹೇಳಲಿಲ್ಲ ಎಂದು ಅವರು ಟೀಕಿಸಿದರು.

ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಲಿಲ್ಲ. ವೀಕ್ಷಣೆಗೂ ಬರಲಿಲ್ಲ, ಪರಿಹಾರ ನೆರವು ಪ್ರಕಟಿಸಲಿಲ್ಲ. ಈ ವೇಳೆ ಪ್ರವಾಹ ಪೀಡಿತ ಪ್ರದೇಶಗಳ ಜನರ ಜತೆಗೆ ನಿಲ್ಲಬೇಕಿದ್ದ ಬಿಜೆಪಿಯ ಸಂಸದರು ಎಲ್ಲಿದ್ದಾರೆಂದು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಉತ್ತರ ಕರ್ನಾಟಕ, ಕರಾವಳಿ ಹಾಗೂ ಹೈದರಾಬಾದ್ ಕರ್ನಾಟಕದ ಸಂಸದರು ಎಲ್ಲಿದ್ದಾರೆಂದು ಹುಡುಕಬೇಕಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದ ಅವರು, ಬಿಜೆಪಿ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

‘ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿ ಹಾಕಲಿದ್ದು, ಗೆಲ್ಲುವ ವಿಶ್ವಾಸವಿದೆ. ಆದರೆ, ಚುನಾವಣೆ ಮುಂದೂಡಲು ಬಿಜೆಪಿ ಪ್ರಯತ್ನ ನಡೆಸಿದೆ. ಮೇಯರ್ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News