ನೆರೆಯಿಂದ ಹಾನಿಗೀಡಾದ ಬೆಳೆಗಳನ್ನು ಪ್ರಧಾನಿಗೆ ಸ್ಪೀಡ್‌ ಪೋಸ್ಟ್ ಮಾಡಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Update: 2019-09-23 12:38 GMT

ಬೆಂಗಳೂರು, ಸೆ.23: ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕ ಜನತೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಕೇಂದ್ರ ಸರಕಾರ ಮಾತ್ರ ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ನಿರ್ಲಕ್ಷ್ಯ ಮಾಡಿದೆ ಎಂದು ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸೋಮವಾರ ನೆರೆ ಸಂತ್ರಸ್ತರ ಕುರಿತು ಕೇಂದ್ರ ಸರಕಾರ ಮೌನ ವಹಿಸಿರುವುದನ್ನು ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಬೆಳೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಸ್ಪೀಡ್‌ಪೋಸ್ಟ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ಜನತೆ ನೆರೆ ಹಾವಳಿಗೆ ತುತ್ತಾಗಿ ತಿಂಗಳು ಕಳೆದಿದೆ. ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವ ಜನತೆ ಬೀದಿಯಲ್ಲಿ ದಿನ ದೂಡುತ್ತಿದ್ದಾರೆ. ಸರಕಾರದಿಂದ ಪರಿಹಾರ ಇವತ್ತು ಬರಬಹುದು, ನಾಳೆ ಬರಬಹುದೆಂದು ಕಾಯುತ್ತಾ ದಿನ ದೂಡುತ್ತಿದ್ದಾರೆ. ಆದರೆ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಮಾತ್ರ ಈ ಬಗ್ಗೆ ಆಸಕ್ತಿಯೇ ಇಲ್ಲವೆಂಬಂತೆ ವರ್ತಿಸುತ್ತಿವೆ ಎಂದು ಅವರು ವಿಷಾದಿಸಿದರು.

ಸಾಲ ಮಾಡಿ ಬೆಳೆದ ಬೆಳೆಗಳು ನೆರೆ ಹಾವಳಿಗೆ ಸಿಲುಕಿ ಸಂಪೂರ್ಣ ನಾಶಗೊಂಡಿವೆ. ಇದರಿಂದ ರೈತರು ಲಕ್ಷಾಂತರ ರೂ. ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಕೇವಲ ತಮ್ಮ ಜೀವಗಳನ್ನು ಹೊರತು ಪಡಿಸಿ ಎಲ್ಲವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ನಿರಾಶ್ರಿತರಿಗೆ ಸಾಂತ್ವಾನ ಹೇಳಿ, ನೆರೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಹಿರಿಯ ನಾಯಕಿಯರು, ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷ ಹಾಗೂ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News