ಇಮ್ರಾನ್ ಎದುರಲ್ಲಿ ಉಲ್ಟಾ ಹೊಡೆದ ಟ್ರಂಪ್: ‘ಮೋದಿ ಹೇಳಿಕೆ ಆಕ್ರಮಣಕಾರಿ’ ಎಂದ ಅಮೆರಿಕಾ ಅಧ್ಯಕ್ಷ

Update: 2019-09-24 08:27 GMT

ಹೊಸದಿಲ್ಲಿ, ಸೆ.24: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹ್ಯೂಸ್ಟನ್‍ ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರುದಿನವೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ.

ಪಾಕಿಸ್ತಾನದ ವಿರುದ್ಧ ಮೋದಿ ಆಕ್ರಮಣಕಾರಿ ಹೇಳಿಕೆ ನೀಡಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ ಟ್ರಂಪ್, ಪಾಕಿಸ್ತಾನ ಉಗ್ರರ ತಾಣವೆಂಬ ಭಾರತದ ಹೇಳಿಕೆಯನ್ನು ಬೆಂಬಲಿಸಲು ನಿರಾಕರಿಸಿದರು.

ಮೂರು ತಿಂಗಳುಗಳ ಅವಧಿಯಲ್ಲಿ ಟ್ರಂಪ್ ಅವರು ಇಮ್ರಾನ್ ಖಾನ್ ಜತೆ ಮಾತುಕತೆ ನಡೆಸಿರುವುದು ಇದು ಎರಡನೇ ಬಾರಿ. ‘ಮೋದಿ ಹ್ಯೂಸ್ಟನ್ ನಲ್ಲಿ ಪಾಕ್ ವಿರುದ್ಧ ಮಾಡಿರುವ ಆಕ್ರಮಣಕಾರಿ ಹೇಳಿಕೆಗೆ ಅಲ್ಲಿ (ಸ್ಟೇಡಿಯಂನಲ್ಲಿ) ಉತ್ತಮ ಪ್ರತಿಕ್ರಿಯೆ ದೊರೆಯಿತು’ ಎಂದ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ಜತೆಯಾಗಿ ಎರಡೂ ದೇಶಗಳಿಗೆ ಉತ್ತಮವಾದುದನ್ನು ಮಾಡಬೇಕೆಂಬುದು  ತಮ್ಮ ನಿರೀಕ್ಷೆ ಎಂದರು. ಕಾಶ್ಮೀರದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು “ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕೆಂಬುದು ನನ್ನ ಇಚ್ಛೆ'' ಎಂದರು.

ಪಾಕಿಸ್ತಾನ ಉಗ್ರವಾದದ ತಾಣ ಎಂಬ ಮೋದಿ ಹೇಳಿಕೆಯನ್ನು ಬೆಂಬಲಿಸುತ್ತೀರಾ ಎಂದು ಕೇಳಿದಾಗ ತಡವರಿಸಿದ ಟ್ರಂಪ್, ಈ  ಹಣೆಪಟ್ಟಿಯನ್ನು ತಾನು ಇರಾನ್ ಗೆ ನೀಡಲು ಬಯಸುವುದಾಗಿ ಹೇಳಿದರು.

ಇಮ್ರಾನ್ ಖಾನ್ ಒಬ್ಬ ಮಹಾನ್ ನಾಯಕ, ಒಳ್ಳೆಯ ಮನುಷ್ಯ ಹಾಗೂ ಉತ್ತಮ ಕ್ರೀಡಾಳು ಎಂದು  ಟ್ರಂಪ್ ಹೊಗಳಿದರು. “ಈ ನಾಯಕನ ಅಡಿಯಲ್ಲಿ ಉತ್ತಮ ಪ್ರಗತಿ (ಉಗ್ರವಾದದ ವಿರುದ್ಧ ಹೋರಾಟ) ನಡೆಸಲಾಗಿದೆ ಎಂದು ಕೇಳಿದ್ದೇನೆ,  ಅವರು ಬಹಳಷ್ಟು ಪ್ರಗತಿ ಸಾಧಿಸಲು ಇಚ್ಛಿಸಿದ್ದಾರೆ. ಬೇರೆ ಯಾವುದೇ ಪರಿಹಾರವಿಲ್ಲ, ಇಲ್ಲದೇ ಇದ್ದರೆ ಸಾವು ಹಾಗೂ ಬಡತನವಷ್ಟೇ ಉಳಿಯಬಹುದು, ಅವರಿಗದು ತಿಳಿದಿದೆ'' ಎಂದರು.

“ಅಮೆರಿಕಾದ ಹಿಂದಿನ ಅಧ್ಯಕ್ಷರು ಪಾಕಿಸ್ತಾನದ ಜತೆ ನ್ಯಾಯಯುತವಾಗಿ ವ್ಯವಹರಿಸಿಲ್ಲ ಎಂಬುದಾಗಿಯೂ ಹೇಳಿದ ಅವರು ಪಾಕಿಸ್ತಾನ ಕೂಡ ಅಮೆರಿಕಾದ ಜತೆ ಉತ್ತಮವಾಗಿ ವರ್ತಿಸಿಲ್ಲ, ಪ್ರಾಯಶಃ ಅದಕ್ಕೂ ಒಂದು ಕಾರಣವಿರಬೇಕು'' ಎಂದರು.

ಇಮ್ರಾನ್ ಖಾನ್ ಅವರತ್ತ ತಿರುಗಿ ಇಲ್ಲಿರುವ, “ಈ ಜಂಟಲ್ ಮ್ಯಾನ್ ಗಳ ಮೇಲೆ ನನಗೆ ನಂಬಿಕೆಯಿದೆ, ಪಾಕಿಸ್ತಾನದ ಮೇಲೆ ನಂಬಿಕೆಯಿದೆ, ನ್ಯೂಯಾರ್ಕಿನಲ್ಲಿ ವಾಸಿಸುವ ಹಲವು ಪಾಕ್ ಗೆಳೆಯರು ನನಗಿದ್ದಾರೆ. ಎಲ್ಲವೂ ಸರಿಯಾಗಲಿದೆ ನನಗೆ ಸಹಾಯ ಮಾಡಲು ಸಾಧ್ಯವಿದೆಯೆಂದಾದರೆ ಸಹಾಯ ಮಾಡಲು ನನಗೆ ಇಚ್ಛೆಯೂ ಇದೆ.'' ಎಂದರು.

“ಭಾರತ ಪಾಕಿಸ್ತಾನ ಜತೆ ಸಂಧಾನಕ್ಕೆ ತಾವು ಮಾಡಿರುವ ಆಫರ್ ಈಗಲೂ ಹಾಗೆಯೇ ಇದೆ. ಆದರೆ ಭಾರತ ಒಪ್ಪದ ಹೊರತು ಅದು ಮುಂದುವರಿಯದು. ಎರಡೂ ದೇಶಗಳಿಗೆ ಬೇಕಿದೆಯೆಂದಾದರೆ ನಾನು ಸಿದ್ಧ'' ಎಂದು ಟ್ರಂಪ್ ಹೇಳಿದರು.

ಇಮ್ರಾನ್ ಪ್ರತಿಕ್ರಿಯಿಸಿ ``ದುರಾದೃಷ್ಟವೆಂದರೆ ಭಾರತ ನಮ್ಮ ಜತೆ ಮಾತನಾಡಲು ಬಯಸುತ್ತಿಲ್ಲ, ಇದು ಬಿಕ್ಕಟ್ಟಿನ ಆರಂಭ ಹಾಗೂ ಅದು ಇನ್ನಷ್ಟು ದೊಡ್ಟದಾಗಲಿದೆ ಎಂಬ ಭಯವಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News