ವಿಧಾನಸಭೆ ಉಪ ಸಮರ: ಟಿಕೆಟ್ ಹಂಚಿಕೆಗೆ ಮೊದಲೇ ಬಿಜೆಪಿಗೆ ಬಂಡಾಯದ ಬಿಸಿ !

Update: 2019-09-24 12:38 GMT

ಬೆಂಗಳೂರು, ಸೆ.24: ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಬಿಜೆಪಿ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಬಂಡಾಯದ ಬಿಸಿ ನುಂಗಲಾರದ ತುತ್ತಾಗಿದೆ.

ಈಗಾಗಲೇ ಅನರ್ಹ ಶಾಸಕರಿಗೆ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಕೆಲ ನಾಯಕರು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಆದರೆ, ಬಿಜೆಪಿಯ ಮೂಲ ಕಾರ್ಯಕರ್ತರು ಇರುವ, ಸಾಂಪ್ರದಾಯಿಕ ಮತಗಳಿರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ದುಡಿದವರಿಗೆ ಅವಕಾಶ ನೀಡುವಂತೆ ಹಲವರ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ, ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಪ್ರತಿನಿಧಿಸುವ ಹೊಸಕೋಟೆ ಕ್ಷೇತ್ರದ ಟಿಕೆಟ್ ಅನ್ನು ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂದೆ ಇಂದು ಜಮಾಯಿಸಿದ ಕಾರ್ಯಕರ್ತರು, ಶರತ್‌ಗೆ ಟಿಕೆಟ್ ನೀಡಲು ಒತ್ತಾಯಿಸಿದರು.

ಸಂಸದ ಬಿ.ಎನ್.ಬಚ್ಚೇಗೌಡ, ಸಹೋದರ ಗೋಪಾಲಗೌಡ, ಆಕಾಂಕ್ಷಿ ಶರತ್ ಬಚ್ಚೇಗೌಡ, ಹೊಸಕೋಟೆ ಬಿಜೆಪಿ ಮುಖಂಡ ಹುಲ್ಲೂರು ಮಂಜುನಾಥ್ ಸೇರಿದಂತೆ ಪ್ರಮುಖರು ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ, ಜಮಾಯಿಸಿದ ಬೆಂಬಲಿಗರು ಶರತ್ ಪರವಾಗಿ ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ, ತಮ್ಮ ಅಭ್ಯರ್ಥಿಗೆ ಟಿಕೆಟ್ ಕೈತಪ್ಪಿದರೆ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆಯನ್ನೂ ನೀಡಿದರು.

ಹೊಸಕೋಟೆ ಮಾತ್ರವಲ್ಲದೆ ಮಹಾಲಕ್ಷ್ಮೀಲೇಔಟ್, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರಿನಲ್ಲೂ ಬಿಜೆಪಿಗೆ ಬಂಡಾಯ ನುಂಗಲಾರದ ತುತ್ತಾಗಿದೆ. ಕೆ.ಆರ್.ಪುರಂನಲ್ಲೂ ಮಾಜಿ ಶಾಸಕ ನಂದೀಶ್ ರೆಡ್ಡಿ ಟಿಕೆಟ್ ಕೈತಪ್ಪಿದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News