ಆಡಳಿತ ಪ್ರಕ್ರಿಯೆಗಳಲ್ಲಿ ನೀತಿನಿಯಮಗಳನ್ನು ಪಾಲಿಸುವುದರಿಂದ ಯಾರಿಗೆ ಅನುಕೂಲ?

Update: 2019-09-24 18:17 GMT

ವ್ಯಕ್ತಿಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಉದಾರವಾದಿ ತತ್ವಗಳಿಗೆ ಹಾಗೂ ಅದನ್ನು ರಕ್ಷಿಸುವ ಹಕ್ಕುಗಳಿಗೆ ಬದ್ಧವಾಗಿರುವ ಯಾವುದೇ ಸಮಾಜವು ಆಡಳಿತ ಪ್ರಕ್ರಿಯೆಗಳು ನೀತಿನಿಯಮಗಳಿಗೆ ಬದ್ಧವಾಗಿರುವುದು ಅತ್ಯಂತ ಮುಖ್ಯವೆಂದು ಭಾವಿಸುತ್ತದೆ. ತನಿಖಾ(ಪೊಲೀಸ್) ಹಾಗೂ ಸತ್ಯ ದೃಢೀಕರಣ (ಫೊರೆನ್ಸಿಕ್) ಅಂಗಗಳು ಪಾರದರ್ಶಕವಾಗಿಯೂ ಹಾಗೂ ಸಮರ್ಥವಾಗಿಯೂ ಇರುವ ಮೂಲಕ ನ್ಯಾಯದಾನ ಪ್ರಕ್ರಿಯೆಗಳಲ್ಲಿ ನೀತಿನಿಯಮಗಳ ಬದ್ಧತೆಯು ಖಾತರಿಗೊಳ್ಳುತ್ತದೆಂದು ವಿಶೇಷವಾಗಿ ಹೇಳಬೇಕಿಲ್ಲ. ಪೊಲೀಸ್ ಸಿಬ್ಬಂದಿ ಹಾಗೂ ಫೊರೆನ್ಸಿಕ್ ತಜ್ಞರು ತಮ್ಮ ಪರಿಣಿತಿ ಮತ್ತು ಜ್ಞಾನವನ್ನು ಬಳಸಿ ಅನುಮಾನಕ್ಕೆಡೆಯಿಲ್ಲದಂತೆ ಸಾಕ್ಷ್ಯ ಮತ್ತು ಪುರಾವೆಗಳನ್ನು ಒದಗಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಮಿನಲ್ ಪ್ರಕರಣಗಳಲ್ಲಿನ ನ್ಯಾಯಪ್ರಕ್ರಿಯೆಗಳು ಅಂತಿಮ ಫಲಿತಾಂಶದಲ್ಲಿ ವ್ಯಕ್ತಿಗಳಿಗೆ ನ್ಯಾಯ ಒದಗಿಸಬೇಕಾಗುತ್ತದೆ. ಆದ್ದರಿಂದಲೇ ಪ್ರಕ್ರಿಯೆಗಳು ನೀತಿ ನಿಯಮಗಳಿಗೆ ಬದ್ಧವಾಗಿರಬೇಕೆಂದು ಹೇಳುವಾಗ ‘‘ನ್ಯಾಯವನ್ನು ಒದಗಿಸಬೇಕು ಮಾತ್ರವಲ್ಲದೆ ಒದಗಿಸುವಂತೆ ಕಾಣಲೂ ಬೇಕು’’ ಎಂಬ ನಾಣ್ಣುಡಿಯೂ ಕೂಡಾ ಚಾಲ್ತಿಯಲ್ಲಿದೆ. ನ್ಯಾಯವು ಇಂತಹ ಪ್ರಕ್ರಿಯೆಗಳು ಎಷ್ಟು ನೀತಿನಿಯಮಗಳಿಗೆ ಬದ್ಧವಾಗಿರುತ್ತವೆ ಎಂಬುದನ್ನು ಆಧರಿಸಿರುತ್ತವೆ.

ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಗಳಂತೂ ಫೊರೆನ್ಸಿಕ್ ಪ್ರಯೋಗಾಲಯಗಳಲ್ಲಿ ಅನುಸರಿಸುವ ನಿಷ್ಪಕ್ಷಪಾತ ಹಾಗೂ ವೈಜ್ಞಾನಿಕ ವಸ್ತುನಿಷ್ಠತೆ ಮತ್ತು ಅಂತಹ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ನಡೆಸುವ ಸಂಸ್ಥೆಗಳ ನಿರೂಪಿತ ಪ್ರಕ್ರಿಯಾಬದ್ಧತೆ ಮತ್ತು ಆ ಮೂಲಕ ಪಕ್ಷಪಾತ ರಹಿತತೆಯನ್ನೇ ಅಳವಡಿಸಿಕೊಂಡಿರಬೇಕಿರುತ್ತದೆ. ಈ ಸಂಸ್ಥೆಗಳು ಯಾವುದೇ ಬಗೆಯ ಹಸ್ತಕ್ಷೇಪಕ್ಕೆ ಅಥವಾ ಸಡಿಲತೆಗೆ ಪಕ್ಕಾಗದಂತೆ ಸುಸ್ಪಷ್ಟವಾದ ಪುರಾವೆಗಳನ್ನು ಒದಗಿಸಬೇಕಿರುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಸಾಕ್ಷಿಯನ್ನು ನಾಶಗೊಳಿಸಿದ ಅಥವಾ ದುರ್ಬಲಗೊಳಿಸಿದ ಆರೋಪವೇ ಅವರ ಮೇಲೆ ಬರದ ರೀತಿಯಲ್ಲಿ ಅವರು ತಮ್ಮ ಕರ್ತವ್ಯವನ್ನು ಮಾಡಬೇಕಿರುತ್ತದೆ. ತನಿಖೆಯೆಂಬುದು ಯಾಂತ್ರಿಕ ಕ್ರಿಯೆಯಲ್ಲ. ಎಷ್ಟೇ ಔಪಚಾರಿಕ ತರಬೇತಿಯನ್ನು ಪಡೆದಿದ್ದರೂ ಆಯಾ ವ್ಯಕ್ತಿಗಳು ಹೊಂದಿರುವ ತಮ್ಮದೇ ಆದ ಪರಿಶೀಲನಾ ದೃಷ್ಟಿಕೋನವನ್ನೂ ಸಂಪೂರ್ಣವಾಗಿ ಮೀರಿಬರಲು ಆಗುವುದಿಲ್ಲ. ಪೊಲೀಸರ ಪಕ್ಷಪಾತಿ ದೃಷ್ಟಿಕೋನ ಹಾಗೂ ರಾಜಕೀಯ ರಕ್ಷಣೆಗಳು ಜಗತ್ತಿನಾದ್ಯಂತ ಇರುವ ಸಮಸ್ಯೆಯೇ ಆಗಿದ್ದು ಭಾರತವೂ ಈ ವಿಕೃತಿಗೆ ಹೊರತೇನಲ್ಲ. ಆದರೂ ಈ ವಾಸ್ತವಗಳು ನ್ಯಾಯದ ತೋರಿಕೆಯನ್ನೂ ಸಹ ನಗಣ್ಯಗೊಳಿಸುವುದಲ್ಲದೆ ಕ್ರಿಮಿನಲ್ ಕಾನೂನಿನ ಸಹಜ ಮೌಲ್ಯವನ್ನೂ ಸಹ ಕೆಳಗಿಳಿಸುತ್ತದೆ.

ಪ್ರಕ್ರಿಯಾತ್ಮಕ ಮತ್ತು ಅಭಿಯೋಜಕ ಪಕ್ಷಪಾತವು ಸಾಕ್ಷಿ-ಪುರಾವೆಗಳನ್ನು ಸಡಿಲಗೊಳಿಸುತ್ತದೆ, ತನಿಖೆಯನ್ನು ವಿಳಂಬಗೊಳಿಸುತ್ತದೆ ಮತ್ತು ಅಂತಿಮವಾಗಿ ಚಾರ್ಜ್‌ಶೀಟ್ ಅನ್ನು ದಾಖಲಿಸುವುದನ್ನೂ ಸಹ ವಿಳಂಬ ಮಾಡಿಸುತ್ತದೆ. ಪೊಲೀಸರು ಮತ್ತು ಫೊರೆನ್ಸಿಕ್ ಪರಿಣಿತರು ಒಂದು ನಿರೂಪಿತ ವಿಧಿ-ವಿಧಾನಗಳಿಗೆ ಒಳಪಟ್ಟೇ ಕೆಲಸ ಮಾಡಬೇಕಾಗುತ್ತದೆ. ಆದರೂ ಒಳಗಿನವರಾಗಿ ಅವರಿಗೆ ಅಧಿಕಾರ ಹಾಗೂ ವಿಷಯ ಜ್ಞಾನದ ಸೌಲಭ್ಯವಿರುತ್ತದೆ. ಕೆಲವೊಮ್ಮೆ ಇವು ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯವನ್ನು ಪಡೆದುಕೊಳ್ಳಲು ಅಡ್ಡಗಾಲಾಗುತ್ತದೆ. ತನಿಖೆಯಲ್ಲಿ ಕಂಡುಬರುವ ಲೋಪದೋಷಗಳಿಂದಲೇ ಅಪರಾಧಿಗಳಿಗೆ ಶಿಕ್ಷಾ ಪ್ರಮಾಣವು ಕಡಿಮೆಯಾಗುತ್ತದೆ. ಮಾತ್ರವಲ್ಲ ಕೆಲವು ಪ್ರಕರಣಗಳಲ್ಲಿ ಅಪರಾಧಿಯು ದೋಷಮುಕ್ತರೂ ಆಗಿ ಖುಲಾಸೆಯಾಗಿ ಬಿಡುತ್ತಾರೆ. ಈ ಖುಲಾಸೆಗಳು ಯಾವುದೇ ರೀತಿಯ ಆತ್ಮನಿರೀಕ್ಷಣೆಗೇನೂ ದಾರಿ ಮಾಡಿಕೊಡುವುದಿಲ್ಲ. ಅದರ ಬದಲಿಗೆ ಈ ರೀತಿ ಖುಲಾಸೆಯಾದವರನ್ನು ಬಹಿರಂಗವಾಗಿ ಸಂಭ್ರಮಾಚರಣೆ ಮೂಲಕ ಬರಮಾಡಿಕೊಳ್ಳುವಂತೆ ಕೆಲವರನ್ನು ಪ್ರಚೋದಿಸುತ್ತದೆ. ನಿಗದಿಯಾಗಿರುವ ವಿಧಿ-ವಿಧಾನಗಳು ಮತ್ತು ತನಿಖಾಧಿಕಾರಿಗಳ ವ್ಯಕ್ತಿನಿಷ್ಠ ಪೂರ್ವಗ್ರಹಗಳ ನಡುವಿನ ವೈರುಧ್ಯವು ನ್ಯಾಯ ಪ್ರಕ್ರಿಯೆಯಲ್ಲಿ ಒಂದು ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ.

ತನಿಖೆಯನ್ನು ಮಾಡುವ ಪೊಲೀಸರು, ತನಿಖೆಯನ್ನು ದೃಢೀಕರಿಸುವ ಫೊರೆನ್ಸಿಕ್ ಪರಿಣಿತರು ಮತ್ತು ವಾದ ಮಾಡುವ ಅಭಿಯೋಜಕರೇ ನ್ಯಾಯದ ಹಣೆಬರಹವನ್ನು ತೀರ್ಮಾನಿಸಿಬಿಡುತ್ತಾರೆ. ಈ ಪರಿಸ್ಥಿತಿಗಳು ನಮ್ಮ ನ್ಯಾಯದಾನ ಪ್ರಕ್ರಿಯೆಯ ಸಾರ, ಸತ್ವ ಮತ್ತು ಸಾಮರ್ಥ್ಯಗಳನ್ನೂ ಸಹ ಪ್ರಭಾವಿಸುತ್ತವೆ. ಈ ಪ್ರಕ್ರಿಯೆಗಳು ನ್ಯಾಯೋಚಿತವೂ ಮತ್ತು ನಿಯಮಬದ್ಧವೂ ಆಗಿರುವುದು ಏಕೆ ಮುಖ್ಯವೆಂದರೆ ಆಗ ಮಾತ್ರ ಅದು ಸಾಮಾಜಿಕ ಅಥವಾ ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾದ ಅವಕಾಶವನ್ನು ಒದಗಿಸುತ್ತದೆ. ನಮ್ಮ ನಾಗರಿಕ ಸಮಾಜದ ನೈತಿಕ ನ್ಯಾಯಬದ್ಧತೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸಲು ಸಾಧ್ಯವಿಲ್ಲದವರಿಗೆ ಪ್ರಕ್ರಿಯೆಗಳು ನಿಯಮ ಹಾಗೂ ನ್ಯಾಯಬದ್ಧವಾಗಿರುವುದು ಅತ್ಯಗತ್ಯವಾಗಿರುತ್ತದೆ. ರಾಜಕೀಯ ಸಮುದಾಯದೊಳಗಿನ ಅತ್ಯಂತ ನಿಕೃಷ್ಟರಾಗಿಸಲ್ಪಟ್ಟವರಿಗೂ ಪ್ರಕ್ರಿಯೆಗಳು ನೀತಿ ಮತ್ತು ನಿಮಯಬದ್ಧವಾಗಿರುವುದು ಅತ್ಯಗತ್ಯ.

ಸಮಾಜದ ಪ್ರಬಲ ಸಮುದಾಯಗಳಿಂದ ನಷ್ಟ ಮತ್ತು ಹಾನಿಗೊಳಗಾದ ಸಮುದಾಯಗಳಿಗೆ ನ್ಯಾಯ ಪ್ರಕ್ರಿಯೆಗಳು ನೀತಿ ಮತ್ತು ನಿಯಮಬದ್ಧವಾಗಿರುವುದು ಅತ್ಯಗತ್ಯವಾಗುತ್ತದೆ. ಸಾಂಸ್ಥಿಕವಾಗಿ ಅಪಾಯಕ್ಕೊಳಗಾದ ಮತ್ತು ಸಾಮಾಜಿಕವಾಗಿ ಸಂತ್ರಸ್ತವಾಗಿರುವ ಅಲಕ್ಷಿತ ಸಮುದಾಯಗಳಿಗೂ ಸಹ ಪ್ರಕ್ರಿಯೆಗಳು ನೀತಿ ಮತ್ತು ನಿಯಮಬದ್ಧವಾಗಿರುವುದು ಅತ್ಯಂತ ಅವಶ್ಯಕವಾಗಿರುತ್ತದೆ. ತನಿಖಾ ಪ್ರಕ್ರಿಯೆಗಳಲ್ಲಿ ಉದ್ದೇಶಪೂರ್ವಕ ವಿಳಂಬಗಳಿಂದಾಗಿ ಚಾರ್ಜ್‌ಶೀಟ್ ದಾಖಲಾಗುವುದು ತಡವಾಗುತ್ತದೆ. ಮತ್ತದು ಸಂತ್ರಸ್ತ ವ್ಯಕ್ತಿಗಳ ಮನಸ್ಸಿನಲ್ಲಿ ಸಂಕ್ಷೋಭೆಯನ್ನು ಹುಟ್ಟುಹಾಕುತ್ತದೆ. ಆದರೂ ಆ ಸಮುದಾಯಗಳಿಗೆ ಈ ಸಂಸ್ಥೆಗಳ ಮೇಲೆ ಇನ್ನೂ ಅಪಾರವಾದ ಭರವಸೆಗಳಿವೆ. ಜನರು ಈ ಸಂಸ್ಥೆಗಳ ಮೇಲೆ ಇಟ್ಟಿರುವ ಈ ಭರವಸೆಯ ಕಾರಣದಿಂದಲಾದರೂ ನ್ಯಾಯಪ್ರಕ್ರಿಯೆಗಳಲ್ಲಿ ಪಕ್ಷಪಾತಿ ರಾಜಕೀಯ ಮತ್ತು ಸಂಪ್ರದಾಯವಾದಿ ಪೂರ್ವಗ್ರಹಗಳಿರುವ ಮನಸ್ಥಿತಿಗಳ ಹಸ್ತಕ್ಷೇಪವೂ ನಡೆಯದಂತೆ ನೋಡಿಕೊಳ್ಳುವ ಅಗತ್ಯವಿದೆ. ಸಹಜವಾಗಿಯೇ ಸಂತ್ರಸ್ತ ಜನ ಪ್ರಕರಣವನ್ನು ದುರ್ಬಲಗೊಳಿಸುವ ದುರ್ಬಲ ಪುರಾವೆಗಳ ಬಗ್ಗೆ ಸಹಜವಾದ ಅನುಮಾನಗಳನ್ನು ಬೆಳೆಸಿಕೊಳ್ಳುತ್ತಾರೆ. ತನಿಖಾಧಿಕಾರಿಳು ಕರುಣೆಯುಳ್ಳವರಾಗಿರುವುದು ಅಪೇಕ್ಷಣೀಯವಾದರೂ ಯಾರೂ ಅವರಿಂದ ಕರುಣೆಯನ್ನೇನೂ ನಿರೀಕ್ಷಿಸುವುದಿಲ್ಲ. ವಾಸ್ತವವಾಗಿ ಕೆಲವು ಪೊಲೀಸ್ ಅಧಿಕಾರಿಗಳು ಕರುಣೆಯಿಂದ ವರ್ತಿಸುವುದು ಹಲವರ ಅನುಭವಕ್ಕೆ ಬಂದಿರುತ್ತದೆ. ಅದೇನೇ ಇದ್ದರೂ, ಅವರು ತನಿಖಾ ಪ್ರಕ್ರಿಯೆಗಳಲ್ಲಿ ನೀತಿ ಹಾಗೂ ನಿಯಮಬದ್ಧತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆಂಬ ನಿರೀಕ್ಷೆಗಳು ಇರುವುದಂತೂ ನಿಜ.

ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News