ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದ ಸರ್ವ ಜನರ ಆಸ್ತಿ: ಮಾವಳ್ಳಿ ಶಂಕರ್

Update: 2019-09-25 18:38 GMT

ಚಿಕ್ಕಮಗಳೂರು, ಸೆ.25: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ವಿಶ್ವದ ಶ್ರೇಷ್ಟ ಸಂವಿಧಾನ ಎಂದು ಖ್ಯಾತಿಗೆ ಪಾತ್ರವಾಗಿದ್ದ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ನಿರಂತರ ದಾಳಿಗೊಳಗಾಗುತ್ತಿದೆ. ಅಸಮಾನತೆ, ಜಾತಿಯತೆಯಿಂದ ಬಸವಳಿದಿದ್ದ ದೇಶಕ್ಕೆ ಹಾಗೂ ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಿ, ಪ್ರೀತಿ, ಭ್ರಾತೃತ್ವ, ಸಹೋದರತೆಯನ್ನು ಸಾರಿದ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ವ ಜನರ ಆಸ್ತಿಯಂತಿರುವ ದೇಶದ ಸಂವಿಧಾನದ ರಕ್ಷಣೆಗಾಗಿ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಚಿಂತಕ, ಹೋರಾಟಗಾರ ಹಾಗೂ ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಕರೆ ನೀಡಿದ್ದಾರೆ.

ಬುಧವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸರ್ವ ಜನರ ಸಂವಿಧಾನ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರಕಾರ ಆರೆಸ್ಸೆಸ್‍ನ ಕೈಗೊಂಬೆಯಾಗಿದ್ದು, ಕೇಂದ್ರ ಸರಕಾರ ಸಂವಿಧಾನದ ಆಶಯಗಳನ್ನು ಧಿಕ್ಕರಿಸುತ್ತ ಮನುವಾದ ಹಾಗೂ ಶಾಸ್ತ್ರಗಳ ಆಧಾರದ ಮೇಲೆ ಆಡಳಿತ ನಡೆಸಲು ಹುನ್ನಾರ ರೂಪಿಸುತ್ತಿದೆ. ದೇಶದ ಬಹುತ್ವವನ್ನು ಪ್ರಸ್ನಿಸುತ್ತಿರುವ ಮನುವಾದಿ ಅಧಿಕಾರಸ್ಥರು ಶೋಷಿತ ಸಮುದಾಯಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಧಿಕ್ಕರಿಸುತ್ತಾ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮೇಲೆ ವಿಕೃತಿ ಮೆರೆಯುತ್ತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ, ಸಂವಿಧಾನದ ಪ್ರತಿಗಳನ್ನು ಸುಡುತ್ತಿರುವ, ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಿರುವವರ ಮೇಲೆ ಬಿಜೆಪಿ ಸರಕಾರ ಯಾವುದೇ ಕಾನೂನು ಕ್ರಮಕೈಗೊಳ್ಳದೇ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿಯವರು ಹೊರಗಿನಿಂದ ನಯವಾಗಿ ವರ್ತಿಸುತ್ತಾ ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುತ್ತಾರೆ. ಒಳಗಿನಿಂದ ಪ್ರತಿಮೆಗಳನ್ನು ಒಡೆದು ನಯವಂಚನೆ ಮಾಡುತ್ತಾ ಸಂವಿಧಾನ ವಿರೋಧಿ ಕೃತ್ಯ ಎಸಗುತ್ತಿದ್ದಾರೆ. ಹೋರಾಟದ ಫಲವಾಗಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ದೇಶದ ಶೋಷಿತರು, ದಲಿತರು, ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ದಕ್ಕಿರುವುದು ಅಂಬೇಡ್ಕರ್ ಸಂವಿಧಾನ ದೇಶದಲ್ಲಿ ಜಾರಿಯಾದಾಗಿನಿಂದ ಮಾತ್ರ ಎಂದ ಅವರು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ, ಸಾಮಾಜಿಕ ನ್ಯಾಯವನ್ನು ದೇಶದ ಪ್ರತಿಯೊಬ್ಬರಿಗೂ ಸಿಗುವಂತಾಗಲು ಸಂವಿಧಾನ ಕಾರಣವಾಗಿದೆ. ಇಂತಹ ಸಂವಿಧಾನ ಏಕೆ ಬೇಡವಾಗಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್‍ನವರು ಸಾಮಾಜಿಕ ನ್ಯಾಯ, ಸಮಾನತೆಯ ಧ್ಯೋತಕವಾಗಿರುವ ಸಂವಿಧಾನವನ್ನು ಬದಲಾಯಿಸಿ ಮನುವಾದದ ಆಧಾರದ ಮೇಲೆ ಆಡಳಿತ ನಡೆಸಲು ಹುನ್ನಾರ ನಡೆಸಿದ್ದಾರೆ. ಈ ಕಾರಣಕ್ಕೆ ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ದೇಶದ ಸರ್ವಜನರೂ ಸಂವಿಧಾನವನ್ನು ಅರಿತುಕೊಂಡು ಅದರ ರಕ್ಷಣೆಗೆ ಮುಂದಾಗಬೇಕಿದೆ. ಸಂವಿಧಾನವನ್ನು ರಕ್ಷಿಸಿದಲ್ಲಿ ಮಾತ್ರ ಸಂವಿಧಾನ ನಮಗೆ ರಕ್ಷಣೆ ನೀಡುತ್ತದೆ ಎಂದವರು ಅಭಿಪ್ರಾಯಿಸಿದರು.

ಬಿಜೆಪಿ ಮತ್ತು ಆರೆಸ್ಸೆಸ್ ನವರು ಮೀಸಲಾತಿ ಪರಿಕಲ್ಪನೆಯನ್ನು ತೆಗೆದು ಹಾಕುವ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ ಮೀಸಲಾತಿಯಿಂದಾಗಿಯೇ ಪ್ರಸಕ್ತ ದೇಶದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುವಂತಾಗಿದೆ. ಬ್ಯಾಂಕ್‍ಗಳು, ಬೃಹತ್ ಕಾರ್ಖಾನೆಗಳು ರಾಷ್ಟ್ರೀಕರಣವಾಗಿರುವುದರಿಂದಾಗಿ ಎಲ್ಲ ವರ್ಗದವರು ಮೀಸಲಾತಿಯಡಿಯಲ್ಲಿ ಉದ್ಯೋಗ ಪಡೆದು ಗೌರವದಿಂದ ಬದುಕುವಂತಾಗಿದೆ. ಮೀಸಲಾತಿಯೇ ಇಲ್ಲದಿದ್ದರೆ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಸ್ಥಿತಿ ಅಧೋಗತಿಯಾಗಲಿದೆ ಎಂದ ಅವರು, ಮೋದಿ ಸರಕಾರ ಖಾಸಗೀಕರಣಕ್ಕೆ ಒತ್ತು ನೀಡುತ್ತಿದ್ದು, ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಪಿಎಂಒ ಕಚೇರಿಯಲ್ಲಿದ್ದ 280 ಹುದ್ದೆಗಳ ಪೈಕಿ ಓರ್ವ ಪರಿಶಿಷ್ಟ ವರ್ಗದವನು, ನಾಲ್ಕು ಮಂದಿ ಮಾತ್ರ ಹಿಂದುಳಿದ ಸಮುದಾಯದವರಿದ್ದಾರೆ. ಉಳಿದ ಹುದ್ದೆಗಳು ಮೇಲ್ವರ್ಗದವರ ಪಾಲಾಗಿವೆ. ಮೋದಿ ಸರಕಾರ ಹಂತಹಂತವಾಗಿ ಮೀಸಲಾತಿಯ ಅಸ್ತಿತ್ವಕ್ಕೆ ಕುಂದುಂಟು ಮಾಡುತ್ತಿದೆ ಎಂದು ಮಾವಳ್ಳಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ಸುಳ್ಳನ್ನು ಮನುವಾದಿಗಳು ಯುವಜನರ ತಲೆಗೆ ತುಂಬುತ್ತಿದ್ದಾರೆ. ಆದರೆ ಸಂವಿಧಾನ ರಚನಾ ಕರಡು ಸಭೆಯಲ್ಲಿದ್ದ 8 ಮಂದಿ ವಿವಿಧ ಕಾರಣಗಳಿಂದ ಸಂವಿಧಾನದ ಕರಡು ರಚನೆಯಲ್ಲಿ ಸಕ್ರೀಯರಾಗಿರಲಿಲ್ಲ. ಆದರೆ ಅಂಬೇಡ್ಕರ್ ಮಹಿಳೆಯರೂ ಸೇರಿದಂತೆ ಎಲ್ಲ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶದಿಂದ ಹಗಲು ರಾತ್ರಿ ಅವಿರತ ಶ್ರಮ ಹಾಕಿ ವಿವಿಧ ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಶ್ರೇಷ್ಟ ಸಂವಿಧಾನವನ್ನು ರಚಿಸಿದ್ದಾರೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮನುವಾದಿಗಳು ಇತಿಹಾಸ ತಿಳಿಯಬೇಕು. ಯುವಜನರು ಈ ಸತ್ಯ ತಿಳಿದುಕೊಂಡು ಅಂಬೇಡ್ಕರ್ ಹಾಗೂ ಸಂವಿಧಾನ ವಿರೋದಿಗಳಿಗೆ ತಿರುಗೇಟು ನೀಡಬೇಕೆಂದು ಇದೇ ವೇಳೆ ಮಾವಳ್ಳಿ ತಿಳಿಸಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ದೇಶದಲ್ಲಿ ಸಂವಿಧಾನ ಹಾಗೂ ದಲಿತರು, ಮಹಿಲೆಯರು, ಅಲ್ಪಸಂಖ್ಯಾತರು, ಹಿಂದುಳಿದವರ ವಿರೋಧಿ ಶಕ್ತಿಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಜನಾಕ್ರೋಶ, ಜನಾಂದೋಲನ ನಿಂತ ನೀರಾಗಿವೆ. ಸಂವಿಧಾನ ಪರ ಇರುವ ಸಂಘಟನೆಗಳು ಒಡೆದು ಹೋಗುತ್ತಿರುವುದೇ ಇದಕ್ಕೆ ಕಾರಣ. ಸಂಘಟನೆಗಳು ಹರಿದು ಹಂಚಿ ಹೋಗುತ್ತಿರುವದರಿಂದಲೇ ಸಂವಿಧಾನ ವಿರೋಧಿಗಳ ವಿರುದ್ಧದ ಹೋರಾಟಗಳ ಶಕ್ತಿ ಕುಂದುತ್ತಿದೆ. ಅಪಾಯದ ದಿನಗಳನ್ನು ಎದುರಿಸುತ್ತಿರುವ ಸಂವಿಧಾನವನ್ನು ಉಳಿಸಿಕೊಳ್ಳುವ ನಿಟ್ಟಿನಿಂದಾದರೂ ಇಂತಹ ಸಂಘಟನೆಗಳು ಒಗ್ಗೂಡಬೇಕಿದೆ ಎಂದ ಅವರು, ಭಾರತದ ಸಂವಿಧಾನ ಸರ್ವ ಜನರ ಸಂವಿಧಾನ ಆಗಿರಬೇಕಾಗಿದೆ. ಇದಕ್ಕೆ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ ಎಂದು ಕರೆ ನೀಡಿದರು.

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಮಾತನಾಡಿದರು. ಸಮಿತಿಯ ಮೈಸೂರು ವಿಭಾಗದ ಸಂಚಾಲಕ ಶೂದ್ರ ಶ್ರೀನಿವಾಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವಿಭಾಗೀಯ ಪ್ರಧಾನ ಸಂಚಾಲಕ ಕೆ.ಸಿದ್ದರಾಜು, ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎನ್.ಮಹೇಂದ್ರ ಸ್ವಾಮಿ,  ಬಿಎಸ್.ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ನಂಜುಂಡ ಮೇಷ್ಟ್ರು, ವಸಂತ್, ಮೂರ್ತಿ ಬೀಸನಹಳ್ಳಿ, ಲಲಿತಮ್ಮ, ಅಂತೋಣಿಯಮ್ಮ, ಲತಾ ಉಪಸ್ಥಿತರಿದ್ದರು. ಸಮಾವೇಶಕ್ಕೆ ಮುನ್ನ ನಗರದ ತಾಲೂಕು ಕಚೇರಿ ಆವರಣದಿಂದ ಕುವೆಂಪು ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಿತು.

ಕಾಶ್ಮೀರದಲ್ಲಿ 370ನೆ ವಿಧಿಯನ್ನು ರದ್ದು ಮಾಡಿರುವ ಮೋದಿ ಸರಕಾರ ಅಲ್ಲಿನ ಜನರನ್ನು ಆತಂಕ, ಅಭದ್ರತೆಗೆ ದೂಡಿದೆ. ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ಮಾಡಿದೆ. ಜನರು ಆಸ್ಪತ್ರೆ, ಶಿಕ್ಷಣ, ಆಹಾರಕ್ಕೂ ಪರದಾಡುವ ಸ್ಥಿತಿಯಲ್ಲಿದ್ದು, ಅವರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಆದರೆ ಮೋದಿ ಅಮೆರಿಕಾದಲ್ಲಿ ಮೋಜು ಮಾಡುತ್ತಿದ್ದಾರೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುತ್ತಲೇ ಮೋದಿ ಸರಕಾರ ಸಬ್ಕಾ ವಿನಾಶ್ ಮಾಡುತ್ತಿದೆ. ಇಂತಹ ದುರಾಡಳಿತ ವಿರುದ್ಧ ಜನರು ಧ್ವನಿ ಎತ್ತಬೇಕು.

- ಮಾವಳ್ಳಿ ಶಂಕರ್

ಅಂಬೇಡ್ಕರ್ ಗಾಂಧೀಜಿ ಪ್ರಾಣ ಉಳಿಸಿದ್ದರು, ಆರೆಸ್ಸೆಸ್ ಪ್ರಾಣ ತೆಗೆಯಿತು

1931-32ರಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಅಂಬೇಡ್ಕರ್ ಅವರು ತೀವ್ರ ಶೋಷಣೆಗೊಳಗಾಗಿ ಪ್ರಾಣಿಗಳಿಗಿಂತಲೂ ಕಡೆಯಾಗಿದ್ದ ದಲಿತರ ಏಳಿಗೆ ದೃಷ್ಟಿಯಿಂದ ಪ್ರತ್ಯೇಕ ಪ್ರಾತಿನಿಧ್ಯದ ಹಕ್ಕಿಗಾಗಿ ಬ್ರಿಟಿಷರ ಬಳಿ ವಾದ ಮಂಡಿಸಿದ್ದರು. ಇದಕ್ಕೆ ಬ್ರಿಟಿಷರು ಒಪ್ಪಿಗೆ ಸೂಚಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಗಾಂಧೀಜಿ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯವನ್ನು ವಿರೋಧಿಸಿದ್ದರು. ಗಾಂಧೀಜಿ ಇದನ್ನು ವಿರೋಧಿಸಿ ಆಮರಣಾಂತ ಉಪವಾಸ ಕೈಗೊಂಡಿದ್ದರು. ಈ ವೇಳೆ ಅಂಬೇಡ್ಕರ್ ಮುಂದೆ ಗಾಂಧೀಜಿ ಪ್ರಾಣ ಹಾಗೂ ದಲಿತರ ಏಳಿಗೆಯ ವಿಚಾರಗಳಿದ್ದವು. ಆದರೆ ಅಂಬೇಡ್ಕರ್ ಪ್ರತ್ಯೇಕ ಪ್ರಾತಿನಿಧ್ಯದ ವಿಚಾರ ಕೈಬಿಟ್ಟು ಗಾಂಧೀಜಿಯವರ ಮಾತಿಗೆ ಮಣಿದು ಪೂನಾ ಒಪ್ಪಂದ ಮಾಡಿಕೊಂಡರು. ಈ ಮೂಲಕ ಅಂಬೇಡ್ಕರ್ ಅವರು ಗಾಂಧೀಜಿ ಪ್ರಾಣ ಉಳಿಸಿದ್ದಾರೆ. ಆದರೆ ಮುಂದೆ ಆರೆಸ್ಸೆಸ್ ಗೋಡ್ಸೆ ಮೂಲಕ ಗಾಂಧೀಜಿಯವರ ಪ್ರಾಣ ತೆಗೆಯಿತು.
- ಮಾವಳ್ಳಿ ಶಂಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News